ಇಂಡಿಯನ್ ಜಿಪಿ ಎಫ್-1 ರೇಸ್‌ಗೆ ಸಚಿನ್ ಗೈರು; ಯುವಿ ಮೆರಗು
ಕಳೆದ ಬಾರಿ 'ಚಕಾರ್ಡ್ ಫ್ಲ್ಯಾಗ್' ಹಾರಿಸುವ ಮೂಲಕ ಚೊಚ್ಚಲ ಇಂಡಿಯನ್ ಗ್ರಾಂಡ್ ಪ್ರಿ ಫಾರ್ಮುಲಾ ಒನ್ ರೇಸ್‌ಗೆ ಚಾಲನೆ ನೀಡಿದ್ದ ಭಾರತ ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಅನುಪಸ್ಥಿತಿ ಈ ಬಾರಿ ಎಫ್-1 ಪ್ರಿಯರನ್ನು ಕಾಡಲಿದೆ.
ಹೌದು, 2011ನೇ ಸಾಲಿನಲ್ಲಿ ತಮ್ಮ ಸಾನಿಧ್ಯದೊಂದಿಗೆ ಫಾರ್ಮುಲಾ ಒನ್ ಭರ್ಜರಿ ಯಶಸ್ವಿಗೆ ಕಾರಣರಾಗಿದ್ದ ಕ್ರಿಕೆಟ್‌ನ ಜೀವಂತ ಸಚಿನ್ ತೆಂಡೂಲ್ಕರ್ ಈ ಬಾರಿ ರೇಸ್ ಟ್ರ್ಯಾಕ್‌ನಿಂದ ದೂರವುಳಿದಿದ್ದಾರೆ.
ಪ್ರಸ್ತುತ ಕ್ರಿಕೆಟ್ ಚಟುವಟಿಕೆಗಳಲ್ಲಿ ಬ್ಯುಸಿ ಆಗಿರುವ ಸಚಿನ್ ಭಾನುವಾರ ಸಾಗಲಿರುವ ಎಫ್-1 ರೇಸ್ ವೀಕ್ಷಣೆಗೆ ಆಗಮಿಸುತ್ತಿಲ್ಲ. ಮುಂಬರುವ ತವರಿನಲ್ಲಿ ಸಾಗಲಿರುವ ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಯನ್ನು ಎದುರು ನೋಡುತ್ತಿರುವ ಲಿಟ್ಲ್ ಮಾಸ್ಟರ್, ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದ ಮೂಲಕ ತಮ್ಮ ಲಯ ಮರಳಿ ಪಡೆಯುವ ಇರಾದೆಯಲ್ಲಿದ್ದಾರೆ. ಮೂರು ವರ್ಷಗಳ ಬಳಿಕ ಮುಂಬೈ ರಣಜಿ ತಂಡವನ್ನು ಸೇರಿಕೊಂಡಿರುವ ಸಚಿನ್ ನವೆಂಬರ್ 2ರಿಂದ ಆರಂಭವಾಗಲಿರುವ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ.ಈ ನಡುವೆ ಇತ್ತೀಚೆಗಷ್ಟೇ ಶಾಸ್ವಕೋಶ ಕ್ಯಾನ್ಸರ್ ಯಶಸ್ವಿ ಚಿಕಿತ್ಸೆ ಬಳಿಕ ಅದ್ಭುತವಾಗಿ ತಂಡವನ್ನು ಸೇರಿಕೊಂಡಿದ್ದ ಟೀಮ್ ಇಂಡಿಯಾದ 2011 ವಿಶ್ವಕಪ್ ವಿಜೇತ ಆಲ್‌ರೌಂಡರ್ ಯುವರಾಜ್ ಸಿಂಗ್, ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಸಾಗಲಿರುವ ಎಫ್-1 ರೇಸ್‌ಗೆ ಮೆರಗು ನೀಡಲಿದ್ದಾರೆ.
ಅಂತೆಯೇ ಚಕಾರ್ಡ್ ಪ್ಲ್ಯಾಗ್ ಹಾರಿಸಲು ಕ್ರೀಡಾಸಚಿವ ಅಜಯ್ ಮಾಕೆನ್ ಆಹ್ವಾನ ನೀಡಲಾಗಿದ್ದು, ಆದರೆ ಸಚಿವರು ಭಾಗವಹಿಸುವರೇ ಎಂಬುದು ಇನ್ನೂ ಖಚಿತಗೊಂಡಿಲ್ಲ. ಶ್ರೀಲಂಕಾದ ಕ್ರಿಕೆಟಿಗ ಕುಮಾರ ಸಂಗಕ್ಕರ ಸಹ ಭಾಗವಹಿಸುವ ನಿರೀಕ್ಷೆಯಿದೆ. ಉಳಿದಂತೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕ್ ಮೂಲಕ ಆಕೆಯ ಪತಿ ಕ್ರಿಕೆಟಿಗ ಶೋಯಿಬ್ ಮಲಿಕ್ ಕೂಡಾ ಆಗಮಿಸಲಿದ್ದಾರೆ. ಬಾಲಿವುಡ್‌ನಿಂದ ನಟ ಅಜಯ್ ದೇವಗನ್ ಹಾಗೂ ನಟಿ ಸೋನಾಕ್ಷಿ ಸಿಂಗ್ ಕೂಡಾ ರೇಸ್ ಮಜಾ ಸವಿಯಲಿದ್ದಾರೆ.


Click it and Unblock the Notifications









