ಗುಜರಾತಿನಲ್ಲಿ ಮಾರುತಿ ಘಟಕ, 2015ಕ್ಕೆ ಕಾರು ಉತ್ಪಾದನೆ
ಕಂಪನಿಯು ಹರ್ಯಾಣದ ಮಾನೆಸರ್ ಘಟಕ ಸ್ಥಳಾಂತರಿಸುವ ಯೋಜನೆ ಹೊಂದಿಲ್ಲವೆಂದು ಕಂಪನಿಯ ಸಿಒಒ ಎಸ್ ವೈ ಸಿದ್ದಿಕಿ ಸ್ಪಷ್ಟಪಡಿಸಿದ್ದಾರೆ. "ಹರ್ಯಾಣದಿಂದ ಘಟಕ ಶಿಫ್ಟ್ ಮಾಡುವ ಯೋಜನೆಯಿಲ್ಲ. ಗುಜರಾತ್ ಘಟಕದಲ್ಲಿ ಉತ್ಪಾದನೆ 2015ರ ವೇಳೆಗೆ ಆರಂಭವಾಗುವ ನಿರೀಕ್ಷೆಯಿದೆ" ಎಂದು ಅವರು ಹೇಳಿದ್ದಾರೆ.
ಮಾನೆಸರ್ ಘಟಕದಲ್ಲಿ ಉತ್ಪಾದನೆ ಗುರಿ ತಲುಪಲು ಸೆಪ್ಟೆಂಬರ್ ಅಂತ್ಯದಲ್ಲಿ ಡೆಡ್ ಲೈನ್ ನಿಗದಿಪಡಿಸುವುದಾಗಿ ಅವರು ಹೇಳಿದ್ದಾರೆ. "ಜುಲೈ 17ರ ಲಿಸ್ಟಿನಲ್ಲಿ ಸುಮಾರು 1.2 ಲಕ್ಷ ಕಾರುಗಳನ್ನು ಗ್ರಾಹಕರು ಬುಕ್ಕಿಂಗ್ ಮಾಡಿದ್ದರು. ಅದರಲ್ಲಿ ಕೆಲವರು ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಆದರೆ ಹೊಸ ಬುಕ್ಕಿಂಗ್ ಪ್ರಮಾಣವೂ ಅತ್ಯುತ್ತಮವಾಗಿದೆ. ಹಬ್ಬದ ವೇಳೆಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುವ ನಿರೀಕ್ಷೆಯಿದೆ" ಎಂದು ಸಿದ್ದೀಕಿ ಹೇಳಿದ್ದಾರೆ.
ಗುಜರಾತಿನ ಹನ್ಸಲ್ ಪುರದಲ್ಲಿ ಮಾರುತಿ ಸುಜುಕಿ ಕಂಪನಿಯು ಸುಮಾರು 700 ಎಕರೆಯ ಸೈಟನ್ನು ಪರಿಶೀಲಿಸಿದೆ. ಈ ಭೂಭಾಗದ ಸ್ಥಳೀಯ ನಿವಾಸಿಗಳನ್ನು, ರಾಜ್ಯ ಸರಕಾರದ ಅಧಿಕಾರಿಗಳನ್ನು ಒಸಾಮು ಸುಜುಕಿ ಭೇಟಿ ಮಾಡಿದ್ದಾರೆ. "ಗುಜರಾತ್ ರಾಜ್ಯವೂ ನೀಡಿದ ಭೂಮಿ ಅತ್ಯುತ್ತಮವಾಗಿದೆ" ಎಂದು ಮಾರುತಿ ಸುಜುಕಿ ಇಂಡಿಯಾ ಚೇರ್ಮನ್ ಆರ್. ಸಿ. ಭಾರ್ಗವ ಹೇಳಿದ್ದಾರೆ.
ಗುಜರಾತಿನಲ್ಲಿ ವಾರ್ಷಿಕ 2.5 ಲಕ್ಷ ಉತ್ಪಾದನಾ ಸಾಮರ್ಥ್ಯದ ಘಟಕ ನಿರ್ಮಿಸಲು ಕಂಪನಿ ಯೋಜಿಸಿದೆ.


Click it and Unblock the Notifications









