ಹುಷಾರ್, ಕೆಲಸ ಖಾಲಿ ಇದೆ ಅನ್ನುವ ವಂಚಕಜಾಲವಿದೆ!
ಹಲವು ದಿನಗಳ ಹಿಂದೆಯೇ ಉದ್ಯೋಗ ವಂಚನೆ ಕುರಿತು ಮಾರುತಿ ಸುಜುಕಿ ತನ್ನ ವೆಬ್ ಸೈಟ್ ನಲ್ಲಿ ಎಚ್ಚರಿಕೆಯ ಸಂದೇಶವೊಂದನ್ನು ಪ್ರಕಟಿಸುತ್ತಿತ್ತು. ಆದರೆ ಇಮೇಲ್ ವಂಚನೆಯಿಂದ ಹೆಚ್ಚು ಹೆಚ್ಚು ಜನರು ತೊಂದರೆಗೆ ಒಳಗಾಗುತ್ತಿರುವುದರಿಂದ ಕಂಪನಿಯು ಪತ್ರಿಕಾ ಪ್ರಕಟಣೆಯ ಮೊರೆ ಹೋಗಿದೆ.
ವಂಚನೆ ಹೇಗೆ?: ಮಾರುತಿ ಫ್ಯಾಕ್ಟರಿಯಲ್ಲಿ ಕೆಲಸ ಖಾಲಿ ಇದೆ. ಆರಂಭಿಕ ವೇತನ 62 ಸಾವಿರ ರುಪಾಯಿ. ಅರ್ಹತೆಗೆ ಅನುಗುಣವಾಗಿ 2 ಲಕ್ಷ ರುಪಾಯಿವರೆಗೆ ವೇತನ ಪಡೆಯಬಹುದು. ಇತ್ಯಾದಿ ಆಮೀಷಗಳ ಮೂಲಕ ವಂಚಕರು ಸಾವಿರಾರು ಜನರಿಗೆ ಇಮೇಲ್ ಕಳುಹಿಸುತ್ತಿದ್ದರು.
ಈ ಇಮೇಲ್ ನೋಡಿದ ಹಲವಾರು ಜನರು ಅಲ್ಲಿ ಸೂಚಿಸಿದ ಇಮೇಲ್ ವಿಳಾಸಕ್ಕೆ ರೆಸ್ಯೂಂ ಕಳುಹಿಸುತ್ತಿದ್ದರು. ಸಂದರ್ಶನಕ್ಕೆ ಹಾಜರಾಗುವ ಮುನ್ನ 14,350 ರುಪಾಯಿ ಭದ್ರತಾ ಠೇವಣಿ ಇಡುವಂತೆ ತಿಳಿಸಲಾಗುತ್ತಿತ್ತು. ಇಂತಹ ಇಮೇಲ್ ಗಳು ವಂಚಕ ಇಮೇಲ್ ಗಳಾಗಿವೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಿಗದಿತ ದಿನಾಂಕವೊಂದನ್ನು ಸೂಚಿಸಿ ಇದಕ್ಕಿಂತ ಮುನ್ನ ಠೇವಣಿ ಇಡುವಂತೆ ಇಮೇಲ್ ನಲ್ಲಿ ಒಕ್ಕಣೆ ಇರುತ್ತಿತ್ತು. ಆಸಕ್ತಿದಾಯಕ ವಿಷಯವೆಂದರೆ ಈಗಾಗಲೇ 62 ಜನರು ಆಯ್ಕೆಯಾಗಿದ್ದು, ದೆಹಲಿಯ ಎಂಎಸ್ಐಎಲ್ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಲಾಗುತ್ತಿತ್ತು. ದುಡ್ಡುಕಟ್ಟಿ ಮಾರುತಿ ಕಚೇರಿಗೆ ತಲುಪಿದ ಅಭ್ಯರ್ಥಿಗಳಿಗೆ ತಾವು ಮೋಸ ಹೋಗಿರುವ ಸಂಗತಿ ತಿಳಿಯುತ್ತಿತ್ತು.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಜನರು ಇಂತಹ ವಂಚಕ ಜಾಲಗಳಿಂದ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಕಂಪನಿ ಎಚ್ಚರಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









