ಹೊಸ ಬ್ಯಾಟರಿ: ಎಲೆಕ್ಟ್ರಿಕ್ ಕಾರು ದರ ಕಡಿಮೆಯಾಗುತ್ತ?
ಕ್ಯಾಲಿಫೋರ್ನಿಯಾ ಮೂಲದ ಎನ್ವಿಯಾ ಸಿಸ್ಟಮ್ ಕಂಪನಿಯು ಅಗ್ಗದ ರಿಚಾರ್ಜ್ ಮಾಡಬಹುದಾದ ಲೀಥಿಯಂ ಐಯಾನ್ ಬ್ಯಾಟರಿ ಅಭಿವೃದ್ಧಿಪಡಿಸಿದೆ. ಇದು ಮಾರುಕಟ್ಟೆಯಲ್ಲಿರುವ ಇತರ ಲೀಥಿಯಂ ಬ್ಯಾಟರಿಗಳಿಗಿಂತ ಎರಡುಪಟ್ಟು ಹೆಚ್ಚು ದಕ್ಷತೆ ಹೊಂದಿದೆ ಎಂದು ಕಂಪನಿ ಪ್ರತಿಪಾದಿಸಿದೆ.
ನೂತನ ಬ್ಯಾಟರಿ ಅತ್ಯಧಿಕ ದಕ್ಷತೆ ಹೊಂದಿದ್ದು ಎಲೆಕ್ಟ್ರಿಕ್ ಕಾರುಗಳಿಗೆ ಸೂಕ್ತ ಆಯ್ಕೆಯಾಗಲಿದೆ ಎಂದು ಕಂಪನಿ ಹೇಳಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಲೀಥಿಯಂ ಬ್ಯಾಟರಿಗಳಿಗಿಂತ ಇದರ ದರ ಎಷ್ಟೋ ಪಾಲು ಕಡಿಮೆ ಇರಲಿದೆಯಂತೆ. ಇದರಿಂದಾಗಿ ಎಲೆಕ್ಟ್ರಿಕ್ ಕಾರುಗಳ ದರ ಕಡಿಮೆಯಾಗುವ ನಿರೀಕ್ಷೆಯಿದೆ.
"ಕಂಪನಿಯು ಅಭಿವೃದ್ಧಿಪಡಿಸಿರುವ ನೂತನ ಬ್ಯಾಟರಿಯು ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಲಿದೆ. ಹಾಗಂತ ಇದು ಭವಿಷ್ಯದ ಕಾನ್ಸೆಪ್ಟ್ ಅಲ್ಲ. ಈಗಾಗಲೇ ಅಭಿವೃದ್ಧಿಪಡಿಸಲಾಗಿರುವ ಉತ್ಪನ್ನವಾಗಿದೆ" ಎಂದು ಕಂಪನಿಯ ಸಿಇಒ ಅತುಲ್ ಕಪಾಡಿಯಾ ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಈಗ ಷೆವರ್ಲೆ ವೊಲ್ಟ್, ನಿಸ್ಸಾನ್ ಲಿಫ್ ಮತ್ತು ಟೆಲ್ಸಾ ಮಾಡೆಲ್ ಎಸ್ ಮುಂತಾದ ಎಲೆಕ್ಟ್ರಿಕ್ ಕಾರುಗಳು ಜನಪ್ರಿಯವಾಗಿವೆ. ಆದರೆ ಇವುಗಳಿಗೆ ದುಬಾರಿ ದರವಿರುವುದರಿಂದ ಮಾರಾಟ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಯಾ ದೇಶದ ಸರಕಾರಗಳು ವಿಶೇಷ ಉತ್ತೇಜನ ಪ್ಯಾಕೇಜ್ ನೀಡಿದರೂ ಸದ್ಯ ಎಲೆಕ್ಟ್ರಿಕ್ ಕಾರುಗಳು ಅತ್ಯಧಿಕ ಲಾಭದ ಉದ್ಯಮವಾಗಿಲ್ಲವೆಂದು ವಿಶ್ಲೇಷಕರು ಹೇಳುತ್ತಾರೆ.
"ಸಮಸ್ಯೆಯಿರುವುದು ದರದಲ್ಲಿ. ಲೀಥಿಯಂ ಬ್ಯಾಟರಿ ದುಬಾರಿಯಾಗಿರುವುದರಿಂದ ಕಾರುಗಳು ದುಬಾರಿಯಾಗಿವೆ. ಎಲೆಕ್ಟ್ರಿಕ್ ವಾಹನದ ಶೇಕಡ 40ರಷ್ಟು ಹಣಕಾಸು ವೆಚ್ಚ ಲೀಥಿಯಂ ಬ್ಯಾಟರಿಯಿಂದಾಗುತ್ತದೆ. ಹೀಗಾಗಿ ಲೀಥಿಯಂ ಬ್ಯಾಟರಿ ದರ ತಗ್ಗಿಸುವ ಮೂಲಕ ಎಲೆಕ್ಟ್ರಿಕ್ ಕಾರುಗಳ ದರ ತಗ್ಗಿಸಬಹುದು. ನಮ್ಮ ಕಂಪನಿಯ ನೂತನ ಬ್ಯಾಟರಿ ಈ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿದೆ" ಎಂದು ಎನ್ವಿಯಾ ಸಹ ಸಂಸ್ಥಾಪಕರಾದ ಸುಜೀತ್ ಕುಮಾರ್ ಹೇಳುತ್ತಾರೆ.


Click it and Unblock the Notifications









