ಆ ಕರಾಳ ರಾತ್ರಿ ಗುರು ಮಾಡಿದ ಮೂರು ಮಿಸ್ಟೇಕುಗಳು!

ಗುರುರಾಜ್ ಹೀಗೆಲ್ಲ ಯೋಚಿಸುತ್ತ ಕಾರ್ ಡ್ರೈವ್ ಮಾಡುತ್ತಿದ್ದ. ಯಾಕೋ ಒಂಟಿಯೆನಿಸಿತು. ಈ ನಿರ್ಜನ ರಸ್ತೆಯಲ್ಲಿ ಆಗೋಮ್ಮೆ ಈಗೊಮ್ಮೆ ವಾಹನಗಳು ಸಂಚರಿಸುತ್ತಿದ್ದವು. ಬೀಸುವ ಚಳಿಗಾಳಿ ಬೇರೆ. ಕಡುಕತ್ತಲು. ಹೆಡ್ ಲೈಟ್ ಬೆಳಕಲ್ಲಿ ಕಾರು ಓಡಿಸುತ್ತಿದ್ದ. ಸ್ಮಶಾನ ಮೌನ. ನೀರವತೆಯನ್ನು ಸೀಳುವಂತೆ ಆಗೋಮ್ಮೆ ಈಗೊಮ್ಮೆ ರಸ್ತೆಯಲ್ಲಿ ಕರ್ಕಶ ಧ್ವನಿಯಲ್ಲಿ ನಾಯಿಗಳು ಬೊಗಳುತ್ತಿದ್ದವು.
ನಾಳೆ ಊರಿಗೆ ಮುಟ್ಟಲೇಬೇಕು, ಅವಳಿಗೆ ಈ ನೆಕ್ಸೆಸ್ ಉಡುಗೊರೆಯಾಗಿ ನೀಡಲೇಬೇಕು ಎನ್ನುವ ಧಾವಂತದಲ್ಲಿ ಗುರು ಕಾರನ್ನೋಡಿಸುತ್ತಿದ್ದ. ಈ ಹೊತ್ತಿನಲ್ಲಿ ಭೂತಪ್ರೇತಗಳು ಸಂಚರಿಸುವ ಸಮಯ. ಆದರೂ ಅವನಿಗೆ ಪ್ರಯಾಣ ಅನಿವಾರ್ಯ. ಈತ ಮೊದಲ ಬಾರಿಗೆ ಈ ದಾರಿಯಲ್ಲಿ ಗಾಡಿ ಓಡಿಸುತ್ತಿಲ್ಲ.
ಒಂದೇ ವೇಗದಲ್ಲಿ ಕಾರನ್ನೊಡಿಸುತ್ತಿರುವಾಗ ಕಾರಿನ ಮುಂಭಾಗದ ವೈಂಡ್ ಸ್ಕ್ರೀನಿಗೆ ಏನೋ ಬಡಿದಂತಾಯಿತು.
"ಮೊಟ್ಟೆ" ಅವನಿಗರಿವಿಲ್ಲದಂತೆ ಉದ್ಘಾರ ಹೊರಟಿತು.
ಎರಡು ಮೊಟ್ಟೆಗಳು ಪಚಕ್ಕೆಂದು ಕಾರಿನ ಕನ್ನಡಿಗೆ ಹೊಡೆದಿತ್ತು. ತಕ್ಷಣ ಕ್ಲಚ್ ಮೇಲೆ ಕಾಲಿಟ್ಟು ಎಕ್ಸಿಲರೇಟರ್ ಮೇಲಿಂದ ಕಾಲ್ ತೆಗೆದು ಬ್ರೇಕ್ ಅದುಮಿದ. ಅದು ಅವನು ಆ ರಾತ್ರಿ ಮಾಡಿದ ಮೊದಲ ತಪ್ಪು!
ಆಕಾಶದಲ್ಲಿ ಹಕ್ಕಿಗಳು ಹಾರುತ್ತ ಮೊಟ್ಟೆಯಿಡುವುದು ಹಳೆಯ ಚಂದಮಾಮದ ಕಥೆಯಲ್ಲಿದ್ದಿರಬಹುದು. ಹಾರುತ್ತಿರುವಾಗಲೇ ಮೊಟ್ಟೆಯಿಡುವ ಹಕ್ಕಿಗಳಿದ್ದರೂ ಇರಬಹುದು. ಆದ್ರೆ ರಾತ್ರಿ ಹಕ್ಕಿಗಳು ಹಾರುವುದು ಅಪರೂಪ. ಅಷ್ಟೋತ್ತಿಗೆ ಗೂಡು ಸೇರಿ ಹಕ್ಕಿಗಳು ನಿದ್ದೆ ಮಾಡುತ್ತಿರಬಹುದು.
ಎಲ್ಲಿಂದ ಬಂದವು ಈ ಮೊಟ್ಟೆ. ಇದು ಭೂತಪ್ರೇತ ಇರುವ ಸ್ಥಳವೋ. ಹಾಗಂತ ಯೋಚಿಸುತ್ತ ಗುರು ವೈಪರ್ ಆನ್ ಮಾಡಿಬಿಟ್ಟ. ಅದು ಅವನು ಮಾಡಿದ ಎರಡನೇ ತಪ್ಪು!
ನೀರು ಸ್ಪ್ರೇಮಾಡಿ ವೈಪರ್ ಆನ್ ಮಾಡಿದ.
ಮೊಟ್ಟೆಯ ಲೋಳೆ, ಹಳದಿ ಮತ್ತು ನೀರು ಮಿಶ್ರಣವಾಗಿ ಕಾರಿನ ವೈಂಡ್ ಸ್ಕ್ರೀನ್ ಶೇಕಡ 92.5ರಷ್ಟು ಕಾಣದಾಗಿದ್ದವು. ಛೇ ಏನು ತಪ್ಪು ಮಾಡಿದೆ. ಈ ಕನ್ನಡಿಯನ್ನು ತೊಳೆಯುವುದು ಹೇಗಪ್ಪ ಎಂದು ಯೋಚಿಸಿ ತಲೆಮೇಲೆ ಕೈಯಿಟ್ಟುಕೊಂಡ ಗುರು.
ಶುಭ್ರವಾಗಿದ ಕನ್ನಡಿ ತುಂಬಾ ಬಿಳಿ ಪೇಂಟ್ ಮಾಡಿದಂತಾಗಿತ್ತು. ನೀರಿನ ಬಾಟಲಿಡಿದು ಗುರು ಕಾರಿಂದ ಇಳಿದ. ಅದು ಈ ರಾತ್ರಿ ಮಾಡಿದ ಮೂರನೇ ತಪ್ಪು. ಹೀಗೆ ಗುರು ತ್ರಿ ಮಿಸ್ಟೇಕ್ ಮಾಡಿದ್ದ.
ಕಾರಿಂದ ಇಳಿದು ನೋಡುತ್ತಾನೆ. ಆತನ ಸುತ್ತ ನಾಲ್ಕೈದು ಮಂದಿ ಸುತ್ತುವರೆದಿದ್ದಾರೆ. ಏನಾಗುತ್ತೆ ಎಂದು ಯೋಚಿಸುವಷ್ಟರಲ್ಲಿ ಈತನನ್ನು ಹೊಡೆದು ಕಾರಿನಲ್ಲಿದ್ದ ವಸ್ತುಗಳನ್ನೆಲ್ಲ ಆ ಗ್ಯಾಂಗ್ ಸ್ಟಾರುಗಳು ದೋಚಿಯಾಗಿತ್ತು.
ಇದು ವಾಹನ ಟಿಪ್ಸ್: ರಾತ್ರಿ ಪ್ರಯಾಣ ಮಾಡುತ್ತಿರುವಾಗ ಹೀಗೆ ಮೊಟ್ಟೆಗಳು ಬಿದ್ದರೆ ವೈಪರ್ ಆನ್ ಮಾಡದಿರಿ. ನೀರು ಚಿಮುಕಿಸದಿರಿ. ಕಾರನ್ನು ನಿಲ್ಲಿಸಬೇಡಿ. ಈ ಮೂರು ಮಿಸ್ಟೇಕ್ ಮಾಡಿದರೆ ಅಪಾಯಕ್ಕೆ ಅಹ್ವಾನ. ಯಾಕೆಂದರೆ ಈಗ ದರೋಡೆಕೋರರು ಈ ರೀತಿ ಮೊಟ್ಟೆಯೆಸೆದು ದರೋಡೆ ಮಾಡುತ್ತಾರಂತೆ!! ಬಿ ಕೇರ್ ಫುಲ್!


Click it and Unblock the Notifications








