ಬಜಾಜ್ ಅಗ್ಗದ ಕಾರಿಗೆ ಎಳ್ಳುನೀರು ಬಿಟ್ಟ ನಿಸಾನ್
ನವದೆಹಲಿ, ಸೆ 26: ಅಗ್ಗದ ಸಣ್ಣಕಾರು ನಿರ್ಮಾಣಕ್ಕಾಗಿ ಬಜಾಜ್ ಆಟೋ ಜೊತೆಗಿನ ಮೈತ್ರಿಯನ್ನು ನಿಸಾನ್ ಕಡಿದುಕೊಳ್ಳುವುದು ಬಹುತೇಕ ಖಚಿತವಾಗಿದೆ. ನಿಸಾನ್ ಹಿರಿಯ ಅಧಿಕಾರಿಯೊಬ್ಬರು ಈಗಾಗಲೇ ಈ ಕುರಿತು ಪ್ರಕಟಿಸಿದ್ದಾರೆ.
ಅಗ್ಗದ ಸಣ್ಣಕಾರು ನಿರ್ಮಿಸಿಕೊಡುವ ಕುರಿತಾಗಿ 2009ರಲ್ಲಿ ರೆನೊ ನಿಸಾನ್ ಮತ್ತು ಬಜಾಜ್ ಆಟೋ ನಡುವೆ ಒಪ್ಪಂದ ನಡೆದಿತ್ತು. "ನಾವು ಅಗ್ಗದ ಕಾರಿಗಾಗಿ ನಮ್ಮ ಸಂಬಂಧವನ್ನು ಬಜಾಜ್ ಆಟೋ ಜೊತೆಗೆ ಮುಂದುವರೆಸುವುದಿಲ್ಲ"ವೆಂದು ನಿಸಾನ್ ಕಾರ್ಪೊರೆಟ್ ವಿಭಾಗದ ಉಪಾಧ್ಯಕ್ಷ ತೊರು ಹಸೆಗವಾ ಸ್ಪಷ್ಟಪಡಿಸಿದ್ದಾರೆ. ಆದರೆ ಮೈತ್ರಿ ಕಡಿದುಕೊಳ್ಳಲು ಕಾರಣವಾದ ಅಂಶಗಳನ್ನು ಅವರು ಬಹಿರಂಗಪಡಿಸಲು ಇಚ್ಚಿಸಿಲ್ಲ.
ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಬಜಾಜ್ ಆಟೋ ಆರ್ ಇ 60 ಸಣ್ಣಕಾರೊಂದನ್ನು ಪ್ರದರ್ಶಿಸಿತ್ತು.
ಬಜಾಜ್ RE60 ಸಣ್ಣಕಾರು: RE60 ನಾಲ್ಕು ಸಿಟ್ ಹೊಂದಿದ್ದು, ಆಟೋ ರಿಕ್ಷಾಗಳಿಗಿಂತ ಹೆಚ್ಚು ಆರಾಮದಾಯಕತೆ ನೀಡುತ್ತದೆ. ಈ ಪುಟ್ಟ ಕಾರು 200 ಸಿಸಿಯ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 20 ಹಾರ್ಸ್ ಪವರ್ ನೀಡುತ್ತದೆ.
ಈ ಕಾರು ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 35ರಿಂದ 40 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಬಜಾಜ್ ಹೇಳಿದೆ. ಇದರ ದರ ಸುಮಾರು 1 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ. ಇದರ ನಿರ್ವಹಣಾ ವೆಚ್ಚ ಕೂಡ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿದೆ.


Click it and Unblock the Notifications









