ಕಾರು ಖರೀದಿಗೆ ಸೂಕ್ತ ಸಮಯ ಬಲ್ಲಿರೇನಯ್ಯ?
ನೀವು ಪೆಟ್ರೋಲ್ ಕಾರು ಖರೀದಿಸಲು ಉದ್ದೇಶಿಸಿದರೆ ಕಾರು ಕಂಪನಿಗಳು ಏನಾದರೂ ಆಫರ್ ಕೊಟ್ಟೇ ಕೊಡುತ್ತವೆ. ಇದಕ್ಕೆ ಕಾರಣವೇನೆಂದರೆ ಇತ್ತೀಚೆಗೆ ಪ್ರಮುಖವಾಗಿ ಸಣ್ಣ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಜನರು ಡೀಸೆಲ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ.
ದೇಶದ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಸ್ಯಾಮ್) ಅಂಕಿಅಂಶಗಳ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಸಣ್ಣಕಾರುಗಳ ಮಾರಾಟ ಕೇವಲ ಶೇಕಡ 0.68ರಷ್ಟು ಮಾತ್ರ ಏರಿಕೆ ಕಂಡಿದೆ. ಇದು ಕಳೆದೊಂದು ದಶಕದಲ್ಲೇ ಅತ್ಯಂತ ಕಡಿಮೆ ಪ್ರಗತಿಯಾಗಿದೆ.
ಎರಡು ಬಾಕ್ಸ್ ಹ್ಯಾಚ್ ಬ್ಯಾಕ್ ಅಥವಾ ನಾಲ್ಕು ಮೀಟರಿಗಿಂತ ಕಡಿಮೆ ಉದ್ದವಿರುವ ಕಾರುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಅಂದರೆ ಕಳೆದೊಂದು ತಿಂಗಳಿನಿಂದ ಟಾಟಾ ನ್ಯಾನೊ, ಷೆವರ್ಲೆ ಸ್ಪಾರ್ಕ್, ಮಾರುತಿ 800, ಆಲ್ಟೊ, ಎಸ್ಟಾರ್ ಮತ್ತು ವ್ಯಾಗನಾರ್ ಕಾರುಗಳ ಮಾರಾಟ ಇಳಿಕೆ ಕಾಣುತ್ತಿದೆ.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಸುಮಾರು 3,887 ಸ್ಪಾರ್ಕ್ ಕಾರುಗಳು ಮಾರಾಟವಾಗಿದ್ದವು. ಆದರೆ ಕಳೆದ ತಿಂಗಳು ಮಾರಾಟವಾದದ್ದು ಕೇವಲ 811 ಸ್ಪಾರ್ಕ್ ಮಾತ್ರ! 2012ರ ಏಪ್ರಿಲ್ ತಿಂಗಳಲ್ಲಿ ಸುಮಾರು 8,028 ನ್ಯಾನೊ ಕಾರು ಮಾರಾಟವಾಗಿತ್ತು. ಆದರೆ ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಇದಕ್ಕಿಂತ 2 ಸಾವಿರ ಹೆಚ್ಚು ನ್ಯಾನೊ ಮಾರಾಟವಾಗಿತ್ತು.
ಇಂಧನ ದರ ಹೆಚ್ಚಳ, ಬಡ್ಡಿದರ ಹೆಚ್ಚಳ ಇತ್ಯಾದಿ ಕಾರಣಗಳಿಂದ ಜನರು ಸಣ್ಣಕಾರು ಖರೀದಿ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಲೆವಿ ದರ ಹೆಚ್ಚಾಗುವುದು ಕೂಡ ಪೆಟ್ರೋಲ್ ಕಾರಿನಿಂದ ಡೀಸೆಲ್ ಕಾರಿನತ್ತ ಜನರು ಮುಖ ಮಾಡಲು ಕಾರಣವಾಗಿದೆ.
ಹ್ಯುಂಡೈ ವೆರ್ನಾ, ಹೋಂಡಾ ಸಿಟಿ, ಮಾರುತಿ ಡಿಜೈರ್ ಮುಂತಾ ಮಧ್ಯಮ ಗಾತ್ರದ ಕಾರುಗಳ ಮಾರಾಟವೂ ಸಂಕುಚಿತವಾಗಿದೆ. ಕಳೆದ ತಿಂಗಳು ಪ್ರಯಾಣಿಕ ಕಾರುಗಳ ಒಟ್ಟಾರೆ ಮಾರಾಟ ಶೇಕಡ 3.4ರಷ್ಟು ಪ್ರಗತಿ ಕಂಡಿದೆ. ಆದರೆ ಯುಟಿಲಿಟಿ ವಾಹನಗಳ ಮಾರಾಟ ಮಾತ್ರ ಶೇಕಡ 47ರಷ್ಟು ಏರಿಕೆ ಕಂಡಿರೋದು ವಿಶೇಷ.
ಒಟ್ಟಾರೆಯಾಗಿ ಹೇಳಬೇಕೆಂದರೆ ದೇಶಿ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಪ್ರಯಾಣಿಕ ಕಾರುಗಳ ಮಾರಾಟ ಶೇಕಡ 10ರಷ್ಟು ಹೆಚ್ಚಳವಾಗಿದೆ. ಆದರೆ ರಫ್ತು ವಹಿವಾಟು ಇಳಿಕೆ ಕಂಡಿದೆ. ತ್ರಿಚಕ್ರ ವಾಹನಗಳ ಪ್ರಗತಿ ಕೇವಲ ಶೇಕಡ 5,3ರಷ್ಟಿದೆ. ಬೈಕ್ ಮಾರಾಟ ಶೇಕಡ ಶೇಕಡ 6.5ರಷ್ಟು ಪ್ರಗತಿ ಕಂಡಿದೆ. ಒಟ್ಟಾರೆ ವಾಹನ ಮಾರಾಟ ಪ್ರಗತಿ ನಿರಾಶದಾಯಕವಾಗಿದೆ.
ಈ ಆರ್ಥಿಕ ವರ್ಷದ ಆರಂಭದಿಂದ ಪ್ರಯಾಣಿಕ ಕಾರುಗಳ ಮಾರಾಟ ಶೇಕಡ 10-12ರಷ್ಟು ಏರಿಕೆ ಕಾಣುವುದಾಗಿ ಸ್ಯಾಮ್ ಅಂದಾಜಿಸಿತ್ತು. ಆದರೆ ಇದು ಕೇವಲ ಶೇಕಡ 9.3ಕ್ಕೆ ತಲುಪಿದೆ. ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಸಣ್ಣಕಾರುಗಳ ಬೇಡಿಕೆ ಹೀಗೆ ಇರಲಿದೆ. ನಂತರ ದ್ವಿತೀಯಾರ್ಧದಲ್ಲಿ ಇದು ಗಮನಾರ್ಹವಾಗಿ ಏರಿಕೆ ಕಾಣುವ ನಿರೀಕ್ಷೆಯನ್ನು ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ವಾಹನ ಕಂಪನಿಗಳು ಹಲವು ವಿನಾಯಿತಿ, ಆಫರುಗಳನ್ನು ನೀಡುತ್ತಿವೆ. ನೀವು ಖರೀದಿಸುವ ಮುನ್ನ ಡೀಲರುಗಳು ಅಥವಾ ಶೋರೂಂಗಳಲ್ಲಿ ಈ ಕುರಿತು ವಿಚಾರಿಸಿ. ಇಂತಹ ಸಮಯದಲ್ಲಿ ಕಾರು ಖರೀದಿಸಿದರೆ ನಿಮ್ಮ ಕಿಸೆಗೆ ಲಾಭ.


Click it and Unblock the Notifications









