ಇಂಡಿಯನ್ ಗ್ರಾಂಡ್ ಪ್ರಿ: ಸತತ 2ನೇ ಬಾರಿ ವೆಟಲ್ ಚಾಂಪಿಯನ್
ನಿರೀಕ್ಷೆಯಂತೆಯೇ ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಸಾಗಿದ ಇಂಡಿಯನ್ ಗ್ರಾಂಡ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಅತಿ ವೇಗವನ್ನು ಕಾಯ್ದುಕೊಂಡಿರುವ ರೆಡ್ ಬುಲ್ ತಂಡದ ಸೆಬಾಸ್ಟಿಯನ್ ವೆಟಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಶೂಟರ್ ಗಗನ್ ನಾರಂಗ್, ರೇಸ್‌ಗೆ ಚಾಲನೆ ನೀಡುತ್ತಿದ್ದಂತೆ ಶರವೇಗದಲ್ಲಿ ಮುನ್ನುಗ್ಗಿದ್ದ ವೆಟಲ್ ಸತತ ಎರಡನೇ ಬಾರಿ ಇಂಡಿಯನ್ ಗ್ರಾಂಡ್ ಪ್ರಿ ಎಫ್-1 ರೇಸ್ ಗೆದ್ದ ಸಾಧನೆ ಮಾಡಿದರು. ಅಲ್ಲದೆ ಒಟ್ಟಾರೆಯಾಗಿ ನಾಲ್ಕನೇ ಫಾರ್ಮುಲಾ ಒನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕಳೆದ ವರ್ಷ ನಡೆದ ಚೊಚ್ಚಲ ಗ್ರಾಂಡ್ ಪ್ರಿ ರೇಸ್‌ನಲ್ಲಿ ವೆಟಲ್ ಚಾಂಪಿಯನ್ ಎನಿಸಿಕೊಂಡಿದ್ದರು. ಅಂತೆಯೇ ಪ್ರಸಕ್ತ ಸಾಲಿನಲ್ಲಿ ಫೆರಾರಿ ಚಾಲಕ ಸ್ಪೇನ್‌ನ ಫೆರ್ನಾಂಡೊ ಅಲೊನ್ಸೊ ದ್ವಿತೀಯ ಹಾಗೂ ರೆಡ್ ಬುಲ್ ಎಫ್-1 ತಂಡದ ಮತ್ತೊಬ್ಬ ಚಾಲಕ ಆಸ್ಟ್ರೇಲಿಯಾದ ಮಾರ್ಕ್ ವೆಬರ್ ತೃತೀಯ ಸ್ಥಾನ ಗಿಟ್ಟಿಸಿಕೊಂಡರು.ವಿಜಯ್ ಮಲ್ಯ ಒಡೆತನದ ಫೋರ್ಸ್ ಇಂಡಿಯಾ 8ನೇ ಸ್ಥಾನ ಪಡೆಯಿತು. ನಿಕೊ ಹಲ್ಕನ್‌ಬರ್ಗ್ 8ನೇ ಸ್ಥಾನ ಗಳಿಸುವುದರೊಂದಿಗೆ ಫೋರ್ಸ್ ಇಂಡಿಯಾ 4 ಅಂಕ ಗಿಟ್ಟಿಸಿಕೊಂಡಿತು.
ಇದೇ ರೇಸ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ಏಕಮಾತ್ರ ಚಾಲಕ ನರೈನ್ ಕಾರ್ತಿಕೇಯನ್ 21ನೇ ಸ್ಥಾನಕ್ಕೆ ಕುಸಿಯುವ ಮೂಲಕ ನಿರಾಸೆ ಅನುಭವಿಸಿದರು. ಎಚ್‌ಆರ್‌ಟಿ ತಂಡದ ಕಾರ್ತಿಕೇಯನ್ ಕಳೆದ ಬಾರಿ 17ನೇ ಸ್ಥಾನ ಪಡೆದಿದ್ದರು.
ಲಂಡನ್ ಒಲಿಂಪಿಕ್ಸ್ ಪದಕ ವಿಜೇತರಾದ ಗಗನ್ ನಾರಂಗ್, ಸುಶೀಲ್ ಕುಮಾರ್ ಹಾಗೂ ವಿಜಯ್ ಕುಮಾರ್ ಸಹಿತ ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಕ್ರಿಕೆಟಿಗ ಹರಭಜನ್ ಸಿಂಗ್ ಗೆಳತಿ ನಟಿ ಗೀತಾ ಬ್ರಾಸಾ ಜತೆ ಆಗಮಿಸಿದ್ದರೆ ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಕೂಡಾ ಉಪಸ್ಥಿತರಿದ್ದರು. ಬಾಲಿವುಡ್‌ನಿಂದ ಅಜಯ್ ದೇವಗನ್, ಸೋನಾಕ್ಷಿ ಸಿನ್ಹಾ, ನೇಹಾ ದೂಫಿಯಾ, ಅನಿಲ್ ಕಪೂರ್ ಹಾಗೂ ಇನ್ನಿತರ ಗಣ್ಯರು ತಾರಾ ಮೆರಗು ನೀಡಿದ್ದರು.


Click it and Unblock the Notifications









