ದೇಶದಲ್ಲಿ 300 ಕೋಟಿ ರು. ಹೂಡಿಕೆಗೆ ಸ್ಕೋಡಾ ನಿರ್ಧಾರ
ದೇಶದಲ್ಲಿ ವಾಹನ ಉತ್ಪಾದನೆ ಹೆಚ್ಚಿಸಲು ಮತ್ತು ಹೊಸ ವಾಹನಗಳನ್ನು ಪರಿಚಯಿಸಲು ಸ್ಕೋಡಾ ಇಂಡಿಯಾ ಸುಮಾರು 300 ಕೋಟಿ ರುಪಾಯಿ ಹೂಡಿಕೆ ಮಾಡಲು ಯೋಜಿಸಿದೆ. ಫೋಕ್ಸ್‌ವ್ಯಾಗನ್ ಗ್ರೂಪ್ ಮಾಲಿಕತ್ವದ ಜೆಕ್ ಕಾರು ಕಂಪನಿ ಸ್ಕೋಡಾ ತನ್ನ ಪೇರೆಂಟ್ ಕಂಪನಿಯ ಒಟ್ಟಾರೆ 15 ಲಕ್ಷ ವಾಹನ ಮಾರಾಟದ ಗುರಿ ಸಾಧಿಸಲು ಈ ಹೂಡಿಕೆ ಮಾಡಲಿದೆ.
ಕಂಪನಿಯ ನೂತನ ಹೂಡಿಕೆಯು ಉತ್ಪಾದನೆಯ ಸ್ಥಳೀಕರಣಕ್ಕೆ ನೆರವಾಗಲಿದೆ. ಇದರಿಂದ ಕಾರು ದರಗಳೂ ಕಡಿಮೆಯಾಗಲಿದೆ. ಹೆಚ್ಚು ಹೆಚ್ಚು ಸ್ಥಳೀಯ ಉತ್ಪಾದನೆಯಿಂದ ದರ ಕಡಿಮೆಯಾಗಿ ಕಾರು ಮಾರಾಟವೂ ಹೆಚ್ಚಾಗುವ ನಿರೀಕ್ಷೆಯೂ ಕಂಪನಿಗಿದೆ.
ಸ್ಕೋಡಾ ಕಂಪನಿಯ ಜಾಗತಿಕ ಯೋಜನೆಯಲ್ಲಿ ಭಾರತಕ್ಕೂ ಪ್ರಮುಖ ಸ್ಥಾನ ನೀಡಿರುವುದು ನೂತನ ಹೂಡಿಕೆ ಯೋಜನೆಯಿಂದ ಸ್ಪಷ್ಟವಾಗಿದೆ. ಕಂಪನಿಯ ಪ್ರಗತಿ ಕಾರ್ಯತಂತ್ರಕ್ಕೆ ಭಾರತವೂ ಪ್ರಮುಖ ಅಡಿಪಾಯವಾಗಿದೆ.
"ನೂತನ ಹೂಡಿಕೆಯು ಕಂಪನಿಯ ಉತ್ಪಾದನೆಯನ್ನು ಹೆಚ್ಚು ಸ್ಥಳೀಕರಿಸಲಿದೆ. ಜೊತೆಗೆ ಔರಾಂಗಬಾದ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ" ಎಂದು ಸ್ಕೋಡಾ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶಕ್ಕೆ ಹೊಸ ಕಾರುಗಳನ್ನು ಪರಿಚಯಿಸುವ ಯೋಜನೆಯೂ ಕಂಪನಿಗಿದೆ. ಮುಂಬರುವ ದಿನಗಳಲ್ಲಿ ಎರಡು ಸ್ಕೋಡಾ ಕಾರುಗಳು ಆಗಮಿಸುವ ನಿರೀಕ್ಷೆಯಿದೆ. ಅಂದರೆ ಪರಿಷ್ಕೃತ ಒಕ್ಟೊವಿಯಾ ಮತ್ತು ಸಿಟಿಗೊ ಕಾರು ಆಗಮಿಸಲಿದೆ.


Click it and Unblock the Notifications









