ಸ್ಕೋಡಾ ಲೌರಾ: ಹೊಸ ಆವೃತ್ತಿ ಯಾವಾಗ?
ಜೆಕ್ ಗಣರಾಜ್ಯದ ಕಾರು ತಯಾರಿಕಾ ಕಂಪನಿ ಫೋಕ್ಸ್ ವ್ಯಾಗನಿನ ಅಂಗಸಂಸ್ಥೆ ಸ್ಕೋಡಾ ಮುಂದಿನ ವರ್ಷ ಲೌರಾ ಕಾರಿನ ಪರಿಷ್ಕೃತ ಆವೃತ್ತಿಯನ್ನು ದೇಶಕ್ಕೆ ಪರಿಚಯಿಸಲಿದೆ. ನೂತನ ಸ್ಕೋಡಾ ಲೌರಾ, ಈಗ ರಸ್ತೆಯಲ್ಲಿರುವ ಆವೃತ್ತಿಗಿಂತ ಉದ್ದವಾಗಿರುವ ನಿರೀಕ್ಷೆಯಿದೆ.
ನೂತನ ಲೌರಾ ಗಾತ್ರವು ಆಡಿ ಎ3ನಷ್ಟೇ ಇರಲಿದೆ ಎಂದು ವರದಿಗಳು ಅಂದಾಜಿಸಿವೆ. ಹಿಂಭಾಗದ ಸೀಟು ಮತ್ತು ಕ್ಯಾಬಿನ್ ಸ್ಥಳಾವಕಾಶ ಇದರಿಂದ ಹೆಚ್ಚಾಗಲಿದೆ. ನೂತನ ಲೌರಾ ಕಾರಿನ ಎಂಜಿನ್ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಬೃಹತ್ ಲೌರಾ ಮಾತ್ರವಲ್ಲದೇ ಸಣ್ಣಗಾತ್ರದ ಲೌರಾ ಕಾರನ್ನು ಕೂಡ ಪರಿಚಯಿಸಲು ಕಂಪನಿ ಯೋಜಿಸಿದೆಯಂತೆ. ನೂತನ ಸ್ಕೋಡಾ ಲೌರಾ ವಿನ್ಯಾಸವು ಕಂಪನಿಯ ಎಲ್ ಮತ್ತು ವಿಷನ್ ಡಿ ಕಾನ್ಸೆಪ್ಟ್ ನಲ್ಲಿರಲಿದೆ. ಇದರಲ್ಲಿ ಆಟೋಮ್ಯಾಟಿಕ್ ಪಾರ್ಕ್ ಅಸಿಸ್ಟ್ ಮತ್ತು ಆಕ್ಟಿವ್ ಕ್ರೂಷ್ ಕಂಟ್ರೋಲ್ ಇತ್ಯಾದಿ ಫೀಚರುಗಳು ಇರುವ ನಿರೀಕ್ಷೆಯಿದೆ.
ಈಗ ಕಂಪನಿಯು ಮಧ್ಯಮ ಗಾತ್ರದ ಸೆಡಾನ್ ಸ್ಕೋಡಾ ಲೌರಾ ಮಾರಾಟ ಮಾಡುತ್ತಿದೆ. ಇದರ ದರ 13.60 ಲಕ್ಷ ರು.ನಿಂದ 18.40 ಲಕ್ಷ ರು. ಆಸುಪಾಸಿನಲ್ಲಿದೆ. ಇದು 2.0 ಲೀಟರಿನ ಡೀಸೆಲ್ ಮತ್ತು 1.8 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









