ಅಲರ್ಟ್ ಮಾಡೋ ಸ್ಮಾರ್ಟ್ ಕಾರುಗಳಿಗೆ ದಾರಿಬಿಡಿ..

ಭವಿಷ್ಯದಲ್ಲಿ ರಸ್ತೆಗಿಳಿಯುವ ವಾಹನಗಳು ಇಂತಹ ಫೀಚರ್ಸ್ ಹೊಂದಿರಲಿವೆ. ರಸ್ತೆಯಲ್ಲಿ ಸುರಕ್ಷಿತ ಸವಾರಿಗೆ ನೆರವಾಗುವ ವಾಹನ-ವಾಹನಗಳ ನಡುವಿನ ಸಂವಹನ ಸಾಧ್ಯವಾಗಿಸುವ ಭವಿಷ್ಯದ ಸ್ಮಾರ್ಟ್ ವಾಹನ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ವಾಹನ ಕಂಪನಿಗಳು ಮತ್ತು ಸರಕಾರಿ ಏಜೆನ್ಸಿಗಳು ಕೆಲಸ ಮಾಡುತ್ತಿವೆ. ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಅರಿವು ಹೆಚ್ಚಿಸಲು ಇದರಿಂದ ವಾಹನ ಚಾಲಕರಿಗೆ ಸಾಧ್ಯವಾಗಲಿದೆ.
ಈಗ ಹೆಚ್ಚಿನ ವಾಹನಗಳು ಅಂತರ್ ಜಾಲ ಸೌಲಭ್ಯ ಹೊಂದಿವೆ. ಆದರೆ ಇವುಗಳ ಉಪಯೋಗ ಕೇವಲ ನ್ಯಾವಿಗೇಷನ್ ಅಥವಾ ಮನರಂಜನೆ ಉದ್ದೇಶಕ್ಕೆ ಮಾತ್ರ. ಆದರೆ ಅಕ್ಕಪಕ್ಕದಲ್ಲಿರುವ ವಾಹನಗಳಿಂದ ಸುರಕ್ಷಿತ ಸವಾರಿಗೆ ಪೂರಕವಾಗಿರುವ ಸಂದೇಶಗಳು ಮುಂದಿನ ದಿನಗಳಲ್ಲಿ ಬರಬಹುದು.
ಇಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಈಗಾಗಲೇ ಜನರಲ್ ಮೋಟರ್ಸ್ ಮುಂದಾಗಿದೆ. ಡ್ರೈವರ್ ಬಳಿಯಿರುವ ಸ್ಮಾರ್ಟ್ ಫೋನ್ ಮೂಲಕ ಬೇರೆ ಕಾರುಗಳೊಂದಿಗೆ ಸಂವಹನ ನಡೆಸಲಾಗುತ್ತದೆ. ಟ್ರಾಫಿಕ್ ದೀಪದ ಕುರಿತು, ರಸ್ತೆಯಲ್ಲಿ ಅಪಘಾತವಾಗಿದೆ ಮುಂತಾದ ಮಾಹಿತಿಗಳನ್ನು ಸ್ಮಾರ್ಟ್ ವಾಹನಗಳು ನೀಡಬಲ್ಲವು.,
"ವಾಹನ ವಾಹನಗಳ ನಡುವೆ ಸಂಪರ್ಕ ಸೇತುವಾಗುವ ಇಂತಹ ತಂತ್ರಜ್ಞಾನದ ಅವಶ್ಯಕತೆಯಿದೆ. ರಸ್ತೆಯಲ್ಲಿ ಏನು ನಡೆಯುತ್ತಿದೆ ಎಂದು ಕ್ಷಣಾರ್ಧದಲ್ಲಿ ತಿಳಿಯುವಂತಾಗಬೇಕು. ಇದು ಸುರಕ್ಷಿತ ಸವಾರಿಗೆ ಸಹಾಯವಾಗಬಲ್ಲುದು" ಎಂದು ಜಿಎಂ ಉಪಾಧ್ಯಕ್ಷ ಅಲೆನ್ ತಾಬ್ ಹೇಳಿದ್ದಾರೆ.
"ವಾಹನಗಳು ತನ್ನ ಸುತ್ತಮುತ್ತಲಿನ 360 ಡಿಗ್ರಿಯಲ್ಲಿ ಏನು ನಡೆಯುತ್ತಿದೆ" ಎಂಬ ಅರಿವು ಹೊಂದಿರುವುದು ಅತ್ಯಂತ ಅಗತ್ಯ" ಎಂದು ಅವರು ಹೇಳಿದ್ದಾರೆ. ಈಗ ನಾವು ಆನ್ ಬೋರ್ಡ್ ಸೆನ್ಸಾರುಗಳನ್ನು ಹೊಂದಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಈ ಸ್ಥಾನವನ್ನು ವಾಹನ-ವಾಹನ ಸಂವಹನ ಸಾಧನಗಳು ಆಕ್ರಮಿಸಲಿವೆ ಎಂದರು.
ಈ ಸ್ಮಾರ್ಟ್ ಫೋನ್ ನಿಂದ ಕಿರಿಕಿರಿಯೂ ಆಗಬಲ್ಲದು. ಇಂತಹ ನೆಟ್ ವರ್ಕ್ ಕಾರುಗಳು ರಾಶಿ ರಾಶಿ ಮಾಹಿತಿ ನೀಡತೊಡಗಿದರೆ ಚಾಲಕನಿಗೆ ಕಿರಿಕಿರಿ ಆಗುವುದು ಗ್ಯಾರಂಟಿ. ರಸ್ತೆಯಲ್ಲಿರುವ ಸಣ್ಣಪುಟ್ಟ ವಿಷಯಗಳಿಗೂ ಅಥವಾ ಸಂಭಾವ್ಯ ಅಪಘಾತಗಳ ಕುರಿತು ನಿಮ್ಮ ಕಾರು ಪದೇ ಪದೇ ನಿಮ್ಮನ್ನು ಎಚ್ಚರಿಸುವುದು ಇಷ್ಟವಾಗದು.
ಆದರೆ ಇಂತಹ ಮಾಹಿತಿ ಕಿರಿಕಿರಿ ತೊಂದರೆ ತಪ್ಪಿಸಲು ಅಮೆರಿಕ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತೆ ಆಡಳಿತ ಕಾರ್ಯಮಗ್ನವಾಗಿದೆ. ಸುರಕ್ಷಿತ ಸವಾರಿಗೆ ಪೂರಕವಾಗಿರುವ ಸ್ಮಾರ್ಟ್ ವಾಹನಗಳು ಬಳಕೆದಾರರ ಸ್ನೇಹಿಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಅಲೆನ್ ತಾಬ್ ಹೇಳಿದ್ದಾರೆ.


Click it and Unblock the Notifications








