ಮೈಲೇಜಿಗೆ ಸ್ಟಾರ್ ರೇಟಿಂಗ್, ಏನು? ಎತ್ತ? ಯಾವಾಗ?
ಭಾರತ ಸರಕಾರವು 2002ರಲ್ಲಿ ಎಜರ್ನಿ ಎಫಿಶಿಯನ್ಸಿ ಬ್ಯೂರೊ ಸ್ಥಾಪಿಸಿತ್ತು. ಶಕ್ತಿಯ ದಕ್ಷತೆ ಹೆಚ್ಚಿಸುವುದು ಈ ಕಾರ್ಯಾಲಯದ ಕಾರ್ಯ. ಈ ಇಲಾಖೆಯ ಪ್ರಮುಖವಾದ ಕೆಲಸವೊಂದಿದೆ. ಅದೇ ಸ್ಟಾರ್ ಲೇಬಲಿಂಗ್ ಅಥವಾ ಸ್ಟಾರ್ ಪಟ್ಟಿ ನೀಡುವುದು. ಎಲ್ಲಾ ಬ್ರಾಂಡೆಡ್ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಈ ಇಲಾಖೆಯು ಸ್ಟಾರ್ ರೇಟಿಂಗ್ ನೀಡುತ್ತದೆ. ದಕ್ಷತೆ ಮತ್ತು ಕಡಿಮೆ ದಕ್ಷತೆಯ ವ್ಯತ್ಯಾಸ ತಿಳಿಯಲು ಇದು ಗ್ರಾಹಕರಿಗೆ ನೆರವಾಗುತ್ತದೆ.
ಉತ್ಪನ್ನಗಳಿಗೆ ಸ್ಟಾರ್ ರೇಟಿಂಗ್ ನೀಡುವ ಈ ನೀತಿಯನ್ನು ಇನ್ನೊಂದು ಪ್ರಮುಖ ಸೆಗ್ಮೆಂಟಿಗೆ ವಿಸ್ತರಿಸಲಾಗುತ್ತಿದೆ. ಕಾರುಗಳ ಇಂಧನ ದಕ್ಷತೆಗೆ ಸ್ಟಾರ್ ರೇಟಿಂಗ್ ನೀಡುವ ಕುರಿತು ಕಳೆದ ಮೂರು ವರ್ಷಗಳಿಂದ ವದಂತಿಗಳು ಕೇಳಿ ಬರುತ್ತಿತ್ತು. ಇದೀಗ ಇದನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಎನರ್ಜಿ ಎಫಿಶಿಯನ್ಶಿ ಬ್ಯೂರೊ ಯೋಜಿಸಿದೆ. 2013ರ ಏಪ್ರಿಲ್ ಒಂದರಿಂದ ಎಲ್ಲಾ ಕಾರುಗಳು ದಕ್ಷತೆಯ ಸ್ಟಾರ್ ರೇಟ್ ಹೊಂದುವುದು ಕಡ್ಡಾಯವಾಗಲಿದೆ.

ಕಾರುಗಳಿಗೆ ಈ ಇಲಾಖೆಯು ಒಂದರಿಂದ ಐದರವರೆಗೆ ವಿವಿಧ ಸ್ಟಾರ್ ನೀಡಲಿದೆ. ಅತ್ಯಧಿಕ ಹೆಚ್ಚು ಮೈಲೇಜ್ ಇರುವ ಕಾರುಗಳಿಗೆ 5 ಸ್ಟಾರ್ ಅಥವಾ ಪಂಚತಾರ ರೇಟಿಂಗ್, ಕಡಿಮೆ ಮೈಲೇಜ್ ಇರುವ ಕಾರುಗಳಿಗೆ 1 ಸ್ಟಾರ್ ದೊರಕಲಿದೆ. ಗ್ರಾಹಕರು ಸ್ಟಾರ್ ರೇಟಿಂಗ್ ನೋಡಿ ಕಾರುಗಳ ಮೈಲೇಜ್ ತಿಳಿದುಕೊಳ್ಳಬಹುದಾಗಿದೆ.
5 ಸ್ಟಾರ್: 100 ಕಿ.ಮೀ. ಪ್ರಯಾಣಕ್ಕೆ 7 ಲೀಟರ್‌ವರೆಗೆ ಇಂಧನ ಬಳಸಿಕೊಳ್ಳುವ ಕಾರು
4 ಸ್ಟಾರ್: 100 ಕಿ.ಮೀ. ಪ್ರಯಾಣಕ್ಕೆ 7ರಿಂದ 9 ಲೀಟರ್ ವರೆಗೆ ಇಂಧನ ಬಳಸಿಕೊಳ್ಳುವ ಕಾರು
3 ಸ್ಟಾರ್: 100 ಕಿ.ಮೀ. ಪ್ರಯಾಣಕ್ಕೆ 9ರಿಂದ 11 ಲೀಟರ್ ಇಂಧನ ಬಳಸಿಕೊಳ್ಳುವ ಕಾರು
2 ಸ್ಟಾರ್: 100 ಕಿ.ಮೀ. ಪ್ರಯಾಣಕ್ಕೆ 11ರಿಂದ 12 ಲೀಟರ್ ಇಂಧನ ಬಳಸಿಕೊಳ್ಳುವ ಕಾರು
1 ಸ್ಟಾರ್: 100 ಕಿ.ಮೀ. ಪ್ರಯಾಣಕ್ಕೆ 12 ಲೀಟರಿಗಿಂತ ಹೆಚ್ಚು ಇಂಧನ ಕುಡಿಯುವ ಕಾರು
ಆದರೆ ಇಂಧನ ದಕ್ಷತೆ ಇಲಾಖೆಯು ARAI ಸರ್ಟಿಫಿಕೆಟ್ ಆಧಾರದಲ್ಲಿ ಮೈಲೇಜ್ ಪರಿಶೀಲಿಸುವುದೇ ಅಥವಾ ಈ ಇಲಾಖೆಯೇ ಕಾರುಗಳನ್ನು ಟೆಸ್ಟ್ ಮಾಡಿ ಮೈಲೇಜ್ ಕಂಡು ಹಿಡಿಯುವುದೇ ಎನ್ನುವುದು ಸ್ಪಷ್ಟವಾಗಿಲ್ಲ. ಈಗ ದೇಶದಲ್ಲಿರುವ ವಿವಿಧ 330 ಮಾಡೆಲ್ ಕಾರುಗಳಲ್ಲಿ 32 ಕಾರುಗಳು 5 ಸ್ಟಾರ್ ಮತ್ತು 52 ಕಾರುಗಳು 4 ಸ್ಟಾರ್ ಯೋಗ್ಯತೆ ಹೊಂದಿವೆ.


Click it and Unblock the Notifications








