ಚೆನ್ನೈ ಆಟೋಗಳಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಜಾರಿ
ಪ್ರಯಾಣಿಕರ ಸುರಕ್ಷತೆಗೆ ಇನ್ನು ಹೆಚ್ಚಿನ ಒತ್ತು ಕೊಟ್ಟಿರುವ ಮುಖ್ಯಮಂತ್ರಿ ಜೆ. ಜಯಲಿಲಿತಾ ಮುಂದಾಳತ್ವದ ನೆರೆಯ ತಮಿಳುನಾಡು ಸರಕಾರ, ಶೀಘ್ರದಲ್ಲೇ ಆಟೋ ರಿಕ್ಷಾಗಳಲ್ಲಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (ಜಿಪಿಎಸ್) ತಂತ್ರಜ್ಞಾನ ಹಾಗೂ ಪ್ಯಾನಿಕ್ ಬಟನ್ (ಭಯ) ಆಳವಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಮಹಾನಗರಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ತಮಿಳುನಾಡು ಸರಕಾರವು ಇಂತಹದೊಂದು ವಿನೂತನ ಯೋಜನೆಗೆ ಮುಂದಾಗಿದೆ.
ಇದರಂತೆ ಆಟೋ ರಿಕ್ಷಾಗಳಲ್ಲಿರುವ ಮೀಟರ್‌ಗಳಲ್ಲಿ ಪ್ಯಾನಿಕ್ ಬಟನ್ ಆಳವಡಿಸಲಾಗುವುದು. ಹಗಲು ಅಥವಾ ರಾತ್ರಿ ವೇಳೆ ಸಂಚಾರದ ವೇಳೆ ಅಪಾಯವನ್ನು ಮನಗಂಡಲ್ಲಿ ಮಹಿಳೆಯರು ಈ ಬಟನ್ ಒತ್ತಿದ್ದರೆ ಸಾಕು. ಇದು ನೇರವಾಗಿ ಕಂಟ್ರೋಲ್ ರೂಂಗೆ ಸಂದೇಶ ರವಾನಿಸಲಿದೆ. ಇದರಿಂದ ಪೊಲೀಸರಿಗೆ ತುರ್ತಾಗಿ ಕಾರ್ಯಾಚರಣೆ ನಡೆಸಲು ಸಹಕಾರಿಯಾಗಲಿದೆ.
ಚೆನ್ನೈನ ಸಾರಿಗೆ ವ್ಯವಸ್ಥೆಯಲ್ಲಿ ಬಹುಪಾಲು ಹೊಂದಿರುವ ಆಟೋ ರಿಕ್ಷಾಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಆಳವಡಿಸಿದರೆ ಸ್ವಾಗತಾರ್ಹ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಚೆನ್ನೈನಲ್ಲಿ ದಿನನಿತ್ಯ 70,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು ರಸ್ತೆಗಳಲ್ಲಿ ಓಡಾಡುತ್ತಿರುತ್ತವೆ.


Click it and Unblock the Notifications









