ಭಾರತದಲ್ಲೂ ತಲೆಯೆತ್ತಲಿದೆ ಚೀನಾದ ಗ್ರೇಟ್ ವಾಲ್
ಮೂಲಗಳ ಪ್ರಕಾರ ಚೀನಾದಲ್ಲಿ ಎಂಟನೇ ಅತಿದೊಡ್ಡ ವಾಹನ ತಯಾರಕ ಎನಿಸಿಕೊಂಡಿರುವ (ಉತ್ಪನ್ನದಲ್ಲಿ 6ನೇ ಸ್ಥಾನ) ಗ್ರೇಟ್ ವಾಲ್ ಮೋಟಾರ್ಸ್, ಪುಣೆಯಲ್ಲಿ ನೂತನ ಘಟಕ ಆರಂಭಿಸಲಿದೆ. ಅಂದರೆ ಮುಂದಿನ ದಿನಗಳಲ್ಲಿ ಹವೆಲ್ ಎಚ್5 ಎಸ್‌ಯುವಿ ಸೇರಿದಂತೆ ಅನೇಕ ನೂತನ ಕಾರುಗಳು ದೇಶಕ್ಕೆ ಪರಿಚಯವಾಗಲಿದೆ. ಭಾರತದಲ್ಲೇ ಉತ್ಪಾದನೆ ನಡೆಯಲಿರುವುದರಿಂದ ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗಲಿದೆ.
ಈ ಹಿಂದೆ ನವದೆಹಲಿ ಮೂಲದ ಟ್ರಾಕ್ಟರ್ ಉತ್ಪಾದಕ ಅಂತರಾಷ್ಟ್ರೀಯ ಕಾರು ಹಾಗೂ ಮೋಟಾರ್ ಲಿಮಿಟೆಡ್ ಜತೆ ಪಾಲುದಾರಿಕೆ ನಡೆಸಲು ಗ್ರೇಟ್ ವಾಲ್ ಮೋಟಾರ್ಸ್ ಯೋಜನೆ ಹೊಂದಿತ್ತು. ಆದರೆ ಕಾರಣಾಂತರಗಳಿಂದಾಗಿ ಯೋಜನೆ ವಿಫಲಗೊಂಡಿದ್ದರಿಂದ ಸ್ವತಂತ್ರವಾಗಿ ಭಾರತಕ್ಕೆ ಲಗ್ಗೆಯಿಡಲು ಕಂಪನಿ ನಿರ್ಧರಿಸಿದೆ.
ಆರಂಭದಲ್ಲಿ ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಘಟಕ ಆರಂಭಿಸುವ ಕುರಿತು ಆಸಕ್ತಿ ತಾಳಿತ್ತಾದರೂ ಮುಂದುವರಿದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಸರಕಾರದಿಂದ ಪೂರಕ ಬೆಂಬಲ ದೊರಕಿರುವುದರಿಂದ ಪುಣೆಯಲ್ಲಿ ಘಟಕ ತೆರೆಯಲು ನಿರ್ಧರಿಸಿದೆ.
ಈ ಮೂಲಕ ದೇಶದಲ್ಲಿ ಸಾನಿಧ್ಯ ಹೊಂದಿರುವ ಚೀನಾದ ಮೊದಲ ವಾಹನ ತಯಾರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಗ್ರೇಟ್ ವಾಲ್ ಪಾತ್ರವಾಗಲಿದೆ. ಹಾಗೆಯೇ 1,500 ಕೋಟಿ ರು. ಹೂಡಿಕೆ ಮಾಡುವ ಸಂಭವವಿದೆ. ಸದ್ಯ ಲಭ್ಯವಿರುವ ಮಾಹಿತಿಯಂತೆ 2016ರ ವೇಳೆಗೆ ಉತ್ಪಾದನೆ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೂ ಮೊದಲು ಸಾಗಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಹವೆಲ್ ಎಚ್5 ಎಸ್‌ಯುವಿ ಪ್ರದರ್ಶನ ಕಾಣಲಿದೆ.


Click it and Unblock the Notifications









