ಸದ್ಯದಲ್ಲೇ ಹೋಂಡಾ ಅಮೇಜ್ ದರ ಏರಿಕೆ ಸಾಧ್ಯತೆ?
ಇತ್ತೀಚೆಗಷ್ಟೇ ಸ್ಪರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಅಪ್ಪಳಿಸುವ ಮೂಲಕ ಭಾರಿ ಸದ್ದು ಮಾಡಿದ್ದ ಹೋಂಡಾ ಅಮೇಜ್ ಕಾರಿಗೆ ಸದ್ಯದಲ್ಲೇ ದರ ಏರಿಕೆ ಕಂಡುಬರುವ ಸಾಧ್ಯತೆಯಿದೆ.
ಲಾಂಚ್ ಆದ 11 ದಿನಗಳಲ್ಲೇ ನಿರ್ವಹಣೆ, ಮೈಲೇಜ್, ದರ ಆಯ್ಕೆಗಳಲ್ಲಿ ಮೋಡಿ ಮಾಡಿದ್ದ ಅಮೇಜ್ ಡೀಸೆಲ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 5.99 ಲಕ್ಷ ರು.ಗಳಾಗಿವೆ. ಆದರೆ ಕಾರಿಗೆ ಬೇಡಿಕೆ ಹೆಚ್ಚುತ್ತಿರುವುದೇ ಗ್ರಾಹಕರಿಗೆ ಮುಳುವಾಗುವ ಭೀತಿ ಕಾಡುತ್ತಿದೆ.
ಈಗಿನ ಸನ್ನಿವೇಶ ಪ್ರಕಾರ ಹೋಂಡಾ ಅಮೇಜ್ ಡೀಸೆಲ್ ಕಾರು ಬುಕ್ ಮಾಡಿದ ಗ್ರಾಹಕನೊಬ್ಬ ಕನಿಷ್ಠ ನಾಲ್ಕು ತಿಂಗಳು ಕಾಯಬೇಕಾಗುತ್ತದೆ. ಈ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಾಯುವಿಕೆ ಅವಧಿ ಆರು ಇಥವಾ ಅದಕ್ಕಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭವನ್ನು ಹೋಂಡಾ ಅಥವಾ ಗ್ರಾಹಕರು ಇಷ್ಟಪಡಲಾರರು. ಇದರಿಂದ ದರ ಏರಿಕೆ ಕಂಡುಬರುವ ಸಾಧ್ಯತೆಯಿದೆ.
ಗ್ರೇಟರ್ ನೋಯ್ಡಾದಲ್ಲಿರುವ ಹೋಂಡಾ ಕಾರ್ಸ್ ಇಂಡಿಯಾ ಘಟಕದಲ್ಲಿ ವರ್ಷಂಪ್ರತಿ 120000 ಹೋಂಡಾ ಅಮೇಜ್ ಉತ್ಪಾದನೆ ಮಾಡುವ ಯೋಜನೆ ಇರಿಸಿಕೊಳ್ಳಲಾಗಿದೆ. ಹಾಗಿದ್ದರೂ ಬೇಡಿಕೆಗೆ ಅನುಸಾರವಾಗಿ ಈ ಸಂಖ್ಯೆ ವರ್ಧಿಸಲಿದೆ
ಒಟ್ಟಿನಲ್ಲಿ ಮಾರುತಿ ಸುಜುಕಿ ಡಿಜೈರ್ ಆವೃತ್ತಿಗೆ ಪ್ರಬಲ ಪೈಪೋಟಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹೋಂಡಾ ಅಮೇಜ್ ಹೇಗೆ ಮೋಡಿ ಮಾಡಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.


Click it and Unblock the Notifications









