ಐಕಾನಿಕ್ ಹ್ಯುಂಡೈ ಅಸೆಂಟ್ ಭಾರತದಿಂದ ಡ್ರಾಪ್
ಈ ಹಿಂದೆ 1999ನೇ ಇಸವಿಯಲ್ಲಿ ಹ್ಯುಂಡೈ ಅಸೆಂಟ್ ಸೆಡಾನ್ ಹಾಗೂ ಸ್ಯಾಂಟ್ರೊ ಹ್ಯಾಚ್‌ಬ್ಯಾಕ್ ಕಾರುಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದು ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಎಸ್ಟೀಮ್, ಹೋಂಡಾ ಸಿಟಿ, ಸಿಯಾಲೊ, ಫೋರ್ಡ್ ಇಕಾನ್, ಫಿಯೆಟ್ ಸಿಯನ್ನಾ ಹಾಗೂ ಈ ಸೆಗ್ಮೆಂಟ್‌ನಲ್ಲಿ ಕಾಣಿಸಿಕೊಂಡಿರುವ ಇತರ ಕಾರುಗಳಿಗೆ ಪ್ರಮುಖ ಎದುರಾಳಿಯಾಗಿದ್ದವು.
ಆದರೆ 14 ವರ್ಷಗಳ ಬಳಿಕವೀಗ ಅಸೆಂಟ್ ಆವೃತ್ತಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಆಧುನಿಕ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಗೆ ಪೈಪೋಟಿ ನೀಡಲು ಅಸೆಂಟ್‌ನಿಂದ ಸಾಧ್ಯವಾಗುತ್ತಿಲ್ಲ. ಇತ್ತೀಚೆಗಿನ ಮಾರಾಟ ಅಂಕಿಅಂಶಗಳೇ ಇದಕ್ಕೆ ಪುಷ್ಠಿ ನೀಡುತ್ತಿದೆ. ಹಾಗಾಗಿ ದೇಶದಲ್ಲಿನ ಅಸೆಂಟ್ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಕಡಿಮೆ ಮಾರಾಟದ ಜತೆಗೆ ಹೊಸ ಹ್ಯಾಚ್‌ಬ್ಯಾಕ್ ಸಣ್ಣಕಾರನ್ನು ಬಿಡುಗಡೆಗೊಳಿಸುತ್ತಿರುವುದು ಸಹ ಕಂಪನಿಯ ಇಂತಹದೊಂದು ನಿರ್ಧಾರಕ್ಕೆ ಕಾರಣವಾಗಿದೆ. ಹ್ಯುಂಡೈ ನೂತನ ಮಾಡೆಲ್ ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದ್ದು, ಐ10 ಹಾಗೂ ಐ20 ಆವೃತ್ತಿಗಳ ನಡುವೆ ಕಾಣಿಸಿಕೊಳ್ಳಲಿದೆ. ಇದು ಮಾರುತಿ ಸುಜುಕಿ ಸ್ವಿಫ್ಟ್‌ಗೆ ನೇರ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ. ನೂತನ ಕಾರು ವರ್ನಾ ಹಾಗೂ ಐ20 ಆವೃತ್ತಿಯಲ್ಲಿರುವಂತೆಯೇ 'ಫ್ಲೂಯಿಡಿಕ್' ವಿನ್ಯಾಸ ಪಡೆದುಕೊಳ್ಳಲಿದೆ.
ಭಾರತದಲ್ಲಿನ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಂಡರೂ ಹ್ಯುಂಡೈ ಚೆನ್ನೈ ಘಟಕದಲ್ಲಿ ಅಸೆಂಟ್ ಉತ್ಪಾದನೆ ಮುಂದುವರಿಯಲಿದ್ದು, ಇದು ಆಫ್ರಿಕಾ ಹಾಗೂ ಆಲ್ಜೀರಿಯಾ ರಾಷ್ಟ್ರಗಳಿಗೆ ರಫ್ತಾಗಲಿದೆ. ನೂತನ ಹ್ಯುಂಡೈ ಮಾಡೆಲ್ ಫ್ರಂಕ್‌ಫರ್ಟ್ ಆಟೋ ಶೋದಲ್ಲಿ ಅನಾವರಣಗೊಳ್ಳಲಿದ್ದು, 2014ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.


Click it and Unblock the Notifications
