ಹ್ಯುಂಡೈನಿಂದ ಬರಲಿದೆ ಅಗ್ಗದ ಸೆಡಾನ್ ಕಾರು
ಸಣ್ಣ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಸದ್ಯದಲ್ಲೇ ದೇಶಿಯ ಮಾರುಕಟ್ಟೆಗೆ ಅಗ್ಗದ ದರದ ಸೆಡಾನ್ ಕಾರನ್ನು ಪರಿಚಯಿಸಲಿದೆ. ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಹಾಗೂ ಹೋಂಡಾ ಅಮೇಜ್ ಪ್ರತಿಸ್ಪರ್ಧಿಯಾಗಿ ಹ್ಯುಂಡೈನ ಈ ನೂತನ ಎಂಟ್ರಿ ಲೆವೆಲ್ ಸೆಡಾನ್ ಕಾರು ಕಾಣಿಸಿಕೊಳ್ಳಲಿದೆ. ಈ ಹೊಸ ಕಾರು ಅಸೆಂಟ್ ಆವೃತ್ತಿಗೆ ಬದಲಿ ವ್ಯವಸ್ಥೆಯಾಗಿರಲಿದೆ.
ನಿಮ್ಮ ಮಾಹಿತಿಗಾಗಿ, ಸೆಡಾನ್ ಮಾರುಕಟ್ಟೆಯಲ್ಲಿ ಹ್ಯುಂಡೈನ ವರ್ನಾ ಹಾಗೂ ಎಲಂಟ್ರಾ ಆವೃತ್ತಿಗಳು ಈಗಾಗಲೇ ನೆಲೆಯೂರಿದೆ. ಹಾಗಿದ್ದರೂ ಮಾರುತಿ ಸ್ವಿಫ್ಟ್ ಡಿಜೈರ್ ಹಾಗೂ ಹೋಂಡಾ ಅಮೇಜ್ ಮಾರಾಟ ಸಂಖ್ಯೆಯನ್ನು ಹೋಲಿಸಿದಾಗ ಹ್ಯುಂಡೈಗೆ ಚೇತರಿಸಿಕೊಳ್ಳಲು ಕಡಿಮೆ ದರದ ಸೆಡಾನ್ ಕಾರಿನ ಅಗತ್ಯ ಕಂಡುಬರುತ್ತಿದೆ. ಇದು ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಪೈಪೋಟಿ ನೀಡಲು ನೆರವಾಗಲಿದೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ಇನ್ನಷ್ಟೇ ಬಿಡುಗಡೆಯಾಗಲಿರುವ ಗ್ರಾಂಡ್ ಐ10 ಫ್ಲಾಟ್‌ಫಾರ್ಮ್‌ನಲ್ಲೇ ನೂತನ ಹ್ಯುಂಡೈ ಸೆಡಾನ್ ಕಾರು ಸಿದ್ಧಗೊಳ್ಳಲಿದೆ. ಬಹುನಿರೀಕ್ಷಿತ ಹ್ಯುಂಡೈ ಗ್ರಾಂಡ್ ಐ10 ಮುಂಬರುವ ಹಬ್ಬದ ಆವೃತ್ತಿ ವೇಳೆ ಮಾರುಕಟ್ಟೆಗೆ ಅಪ್ಪಳಿಸುವ ನಿರೀಕ್ಷೆಯಿದೆ. ಐ20 ಹಾಗೂ ಐ10 ಆವೃತ್ತಿಗಳ ನಡುವೆ ಕಾಣಿಸಿಕೊಂಡಿರುವ ಗ್ರಾಂಡ್ ಐ10 ದೇಶದ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಆವೃತ್ತಿಗೆ ಪ್ರಮುಖ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಡಿಜೈರ್ ಹಾಗೂ ಅಮೇಜ್ ದರ 5ರಿಂದ 7 ವರೆ ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಹಾಗಾಗಿ 4 ಲಕ್ಷ ರು.ಗಳ ಅಸುಪಾಸಲ್ಲಿ ಎಂಟ್ರಿ ಲೆವೆಲ್ ಸೆಡಾನ್ ಕಾರು ಪರಿಚಯಿಸಿದ್ದಲ್ಲಿ ದೇಶದ ಮಾರುಕಟ್ಟೆಯಲ್ಲಿ ಹ್ಯುಂಡೈ ಅಬ್ಬರಿಸುದರಲ್ಲಿ ಯಾವುದೇ ಸಂಶಯವೂ ಬೇಡ ಎಂಬುದು ಆಟೋ ವಿಶ್ಲೇಷಕರ ಅಭಿಮತವಾಗಿದೆ.


Click it and Unblock the Notifications









