ಮಾರುತಿ ಡೀಸೆಲ್ ಎಂಜಿನ್ ಉತ್ಪಾದನೆಗೆ ಕತ್ತರಿ ಪ್ರಯೋಗ
ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಬೇಡಿಕೆ ಕುಸಿತದ ಹಿನ್ನಲೆಯಲ್ಲಿ ಡೀಸೆಲ್ ಎಂಜಿನ್ ಉತ್ಪಾದನೆಗೆ ಕತ್ತರಿ ಪ್ರಯೋಗಿಸಿದೆ. ಇದರ ಮುಂದುವರಿದ ಭಾಗವೆಂಬಂತೆ ಕಾಂಟ್ರಾಕ್ಟ್ ತಲಹದಿಯಲ್ಲಿ ಕೆಲಸ ಮಾಡುತ್ತಿರುವ 200ರಷ್ಟು ನೌಕರರಿಗೆ ಅನಿರ್ಧಿಷ್ಟಾವಧಿಗೆ ರಜಾ ನೀಡಿ ಮನೆಗೆ ಕಳುಹಿಸಿಕೊಟ್ಟಿದೆ.
ಬಲ್ಲ ಮೂಲಗಳ ಪ್ರಕಾರ 3 ಲಕ್ಷ ಯುನಿಟ್ ಉತ್ಪಾದಿಸುವಷ್ಟು ಸಾಮರ್ಥ್ಯವುಳ್ಳ ಮಾನೇಸರ್ ಘಟಕದಲ್ಲಿ ಡೀಸೆಲ್ ಎಂಜಿನ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಈ ಸಂಬಂಧ ಕಂಪನಿ ವಕ್ತಾರರಲ್ಲಿ ಪ್ರಶ್ನಿಸಿದಾಗ, ಡೀಸೆಲ್ ಘಟಕ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವೊಂದು ಹೊಂದಾಣಿಕೆಗಳನ್ನಷ್ಟೇ ಮಾಡಲಾಗಿದೆ ಎಂದಿದ್ದಾರೆ.
ಮುಂಬೈ ಶೇರು ಸೂಚ್ಯಂಕದಲ್ಲೂ ಗುರುವಾರ ಮಾರುತಿ ಸುಜುಕಿ ಶೇರುಗಳು ಶೇಕಡಾ 2ರಷ್ಟು ಕುಸಿದಿದ್ದವು. ಆಟೋ ವಿಶ್ಲೇಷಕರ ಪ್ರಕಾರ ಡೀಸೆಲ್ ದರಗಳಲ್ಲಿ ಪ್ರತಿ ತಿಂಗಳು ಗಣನೀಯ ವರ್ಧನೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಬೇಡಿಕೆಯಲ್ಲಿ ಕುಸಿಯುತ್ತಿದೆ. ಪರಿಣಾಮವೆಂಬಂತೆ ಜೂನ್ ತಿಂಗಳ ಮಾರಾಟದಲ್ಲೂ ಮಾರುತಿ ಸುಜುಕಿ ಶೇಕಡಾ 12.6ರಷ್ಟು ಕುಸಿತ ದಾಖಲಿಸಿತ್ತು.
ಮಾರುತಿ ಸೇರಿದಂತೆ ಟಾಟಾ ಮೋಟಾರ್ಸ್, ಟೊಯೊಟಾ ಹಾಗೂ ಜನರಲ್ ಮೋಟಾರ್ಸ್ ಹಿನ್ನಡೆ ಅನುಭವಿಸಿದ ಹಿನ್ನಲೆಯಲ್ಲಿ ಸತತ ಎಂಟನೇ ತಿಂಗಳಲ್ಲೂ ದೇಶದ ಕಾರು ಮಾರುಕಟ್ಟೆ ಕುಸಿತ ಅನುಭವಿಸಿತ್ತು.


Click it and Unblock the Notifications









