ಮಾರುತಿ ಎರ್ಟಿಗಾ ಸಿಎನ್‌ಜಿ ಲಾಂಚ್; ದರ 7.30 ಲಕ್ಷ
ನಿರೀಕ್ಷೆಯಂತೆಯೇ ಗ್ರಾಹಕರ ಬೇಡಿಕೆಗಳನ್ನು ಈಡೇರಿಸಿರುವ ದೇಶದ ನಂ. 1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಎಂಪಿವಿ ಎರ್ಟಿಗಾದ ಸಿಎನ್‌ಜಿ ವೆರಿಯಂಟ್ ಬಿಡುಗಡೆಗೊಳಿಸಿದೆ. ಲೈಫ್ ಯುಟಿಲಿಟಿ ವೆಹಿಕಲ್ ಎಂದೇ ಜನಪ್ರಿಯಗೊಂಡಿರುವ ನೂತನ ಮಾರುತಿ ಎರ್ಟಿಗಾ ಸಿಎನ್‌ಜಿ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 7.30 ಲಕ್ಷ ರು.ಗಳಾಗಿವೆ.
'ಎರ್ಟಿಗಾ ಗ್ರೀನ್' ಎಂದು ಹೆಸರಿಸಲ್ಪಡಲಿರುವ ನೂತನ ಎರ್ಟಿಗಾ ಸಿಎನ್‌ಜಿ ವರ್ಷನ್ ಎರಡು ವೆರಿಯಂಟ್‌ಗಳಲ್ಲಿ ಲಭಿಸಲಿದೆ. ಇದರ ಬೇಸ್ ವೆರಿಯಂಟ್ ದರ 6.52 ಲಕ್ಷ ರುಗಳಾಗಿದ್ದು, ಟಾಪ್ ಎಂಡ್ ವೆರಿಯಂಟ್ ಎಕ್ಸ್ ಶೋ ರೂಂ ದರ 7.30 ಲಕ್ಷ ರುಗಳಾಗಿವೆ.
ಗ್ರಾಹಕರ ಇಂದಿನ ಅಗತ್ಯಗಳನ್ನು ಪೂರೈಸುವುದು ಕಂಪನಿಯ ಉದ್ದೇಶವಾಗಿದೆ. ಹಾಗೆಯೇ ಎರ್ಟಿಗಾ ಈಗಾಗಲೇ 2012 ಎಪ್ರಿಲ್ ವೇಳೆಗೆ 87,000 ಯುನಿಟ್ ಮಾರಾಟವನ್ನು ಪೂರ್ಣಗೊಳಿಸಿದೆ ಎಂದು ಮಾರುತಿ ಸುಜುಕಿ ಉಪಾಧ್ಯಕ್ಷರಾಗಿರುವ (ಮಾರ್ಕೆಟಿಂಗ್) ಮನೋಹರ್ ಭಟ್ ತಿಳಿಸಿದ್ದಾರೆ.
ಈ ಮೂಲಕ ಆಲ್ಟೊ, ವ್ಯಾಗನಾರ್, ಇಕೊ, ಎಸ್‌ಎಕ್ಸ್4 ಹಾಗೂ ಎಸ್ಟಿಲೊ ಸಾಲಿಗೆ ಎರ್ಟಿಗಾ ಸೇರ್ಪಡೆಯಾಗಿದೆ. ಯಾಕೆಂದರೆ ಈ ಎಲ್ಲ ಮಾಡೆಲ್‌ಗಳು ಸಿಎನ್‌ಜಿ ಕಿಟ್ ಜತೆ ಲಭ್ಯವಿದೆ. ಒಟ್ಟಾರೆಯಾಗಿ ಮಾರುತಿ ಎರ್ಟಿಗಾ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಜತೆ ಸಿಎನ್‌ಜಿ ವೆರಿಯಂಟ್‌ನಲ್ಲೂ ಲಭ್ಯವಾಗಲಿದೆ.


Click it and Unblock the Notifications









