ಭಾರತದಲ್ಲಿ ಬೆಂಝ್ ಜಿಎಲ್ ಎಸ್‌ಯುವಿ ಉತ್ಪಾದನೆ ಆರಂಭ
ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ಮರ್ಸಿಡಿಸ್ ಬೆಂಝ್ ಜಿಎಲ್ ಕ್ಲಾಸ್ ಐಷಾರಾಮಿ ಕಾರಿನ ಉತ್ಪಾದನೆ ಭಾರತದಲ್ಲಿ ಆರಂಭಗೊಂಡಿದೆ. ಪುಣೆಯ ಚಕನ್ ಘಟಕದಲ್ಲಿ ಬೆಂಝ್ ಜಿಎಲ್ ಕ್ಲಾಸ್ ಉತ್ಪಾದನೆಯನ್ನು ಸ್ಥಳೀಯಗೊಳಿಸಲಾಗಿದೆ.
ನಿಮ್ಮ ಮಾಹಿತಿಗಾಗಿ, ಕಳೆದ ಮೇ ತಿಂಗಳಲ್ಲಿ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್‌ನಿಂದ, ಜಿಎಲ್ ಕ್ಲಾಸ್ ಲಾಂಚ್ ಆಗಿತ್ತು. ಇದರ ಬೆಂಗಳೂರು ಎಕ್ಸ್ ಶೋ ರೂಂ ದರ 78.88 ಲಕ್ಷ ರು.ಗಳಾಗಿವೆ. ಗ್ರಾಹಕರ ಬೇಡಿಕೆಯನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ 100 ಯುನಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.
ಜಿಎಲ್ ಎಸ್‌ಯುವಿ ಕಾರನ್ನು ಸ್ಥಳೀಯಗೊಳಿಸಿರುವುದರಿಂದ ದರದಲ್ಲೂ ಇಳಿಕೆ ಕಂಡುಬಂದಿದೆ. ಇದರ ಎಕ್ಸ್ ಶೋ ರೂಂ ದರವೀಗ 72.58 ಲಕ್ಷ ರು.ಗಳಾಗಿವೆ. ಮರ್ಸಿಡಿಸ್ ಬೆಂಝ್ 350 ಸಿಡಿಐ 4 ಮ್ಯಾಟಿಕ್ ಕಾರು 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಹೊಂದಿದ್ದು, ಇದು 258 ಅಶ್ವಶಕ್ತಿ (510 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
7 ಸ್ಪೀಡ್ ಜಿ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಬೆಂಝ್ ಜಿಎಲ್ 350 ಸಿಡಿಐ ಎಸ್‌ಯುವಿ ಕೇವಲ 7.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸಲಿದೆ. ಭಾರತದ ಚಕನ್ ಘಟಕ ಹೊರತುಪಡಿಸಿ ಬೆಂಝ್ ಜಿಎಲ್ ಕ್ಲಾಸ್ ಉತ್ಪಾದನೆಯಾಗುವ ಏಕಮಾತ್ರ ರಾಷ್ಟ್ರವೆಂದರೆ ಅದು ಅಮೆರಿಕ.


Click it and Unblock the Notifications









