ಭಾರತದಲ್ಲಿ ಸ್ಕೋಡಾ ಫಾಬಿಯಾ ಉತ್ಪಾದನೆ ಸ್ಥಗಿತ
ಭಾರತದಲ್ಲಿ ಫಾಬಿಯಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಉತ್ಪಾದನೆ ಸ್ಥಗತಿಗೊಳಿಸಲು ಸ್ಕೋಡಾ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ನಿರ್ಧಾರವು ಆಟೋ ವಿಶ್ಲೇಷಕರಲ್ಲಿ ಯಾವುದೇ ಅಚ್ಚರಿಯನ್ನುಂಟು ಮಾಡಿಲ್ಲ. ಬದಲಾಗಿ ನಿರೀಕ್ಷಿತವೆಂಬಂತೆ ಮಾರಾಟ ಕುಸಿತಗೊಂಡ ಹಿನ್ನಲೆಯಲ್ಲಿ ಉತ್ಪಾದನೆ ನಿಲುಗಡೆಗೊಳಿಸಲು ಚೆಕ್ ಗಣರಾಜ್ಯ ವಾಹನ ತಯಾರಕ ಕಂಪನಿ ನಿರ್ಧರಿಸಿದೆ.
2008ನೇ ಇಸವಿಯಲ್ಲಿ ಸ್ಕೋಡಾ ಫಾಬಿಯಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಪರಿಚಯವಾಗಿತ್ತು. ಇದರ ಬೇಸ್ ವೆರಿಯಂಟ್ ದರ ಆರು ಲಕ್ಷ ರು.ಗಳಾಗಿವೆ. ಪ್ರೀಮಿಯಂ ಲುಕ್ ಹೊಂದಿರುವ ಹೊರತಾಗಿಯೂ ಹ್ಯಾಚ್‌ಬ್ಯಾಕ್ ಕಾರಿಗೆ ಅಷ್ಟೊಂದು ದೊಡ್ಡ ಮೊತ್ತ ಖರ್ಚು ಮಾಡಲು ಭಾರತೀಯ ಮಧ್ಯಮ ವರ್ಗದ ಗ್ರಾಹಕರು ತಯಾರಾಗಿರಲಿಲ್ಲ. ಇದುವೇ ಸ್ಕೋಡಾ ವೈಫಲ್ಯಕ್ಕೆ ಕಾರಣವಾಗಿತ್ತು.
ಸ್ಕೋಡಾ ಇಂಡಿಯಾ ಘಟಕದಲ್ಲಿ ಕಾರುಗಳ ಜೋಡಣೆ ಕಾರ್ಯ ನಡೆಯುತ್ತಿದೆ. ಕೆಲವೊಂದು ಬಾರಿ ರಿಯಾಯಿತಿ ದರ ಘೋಷಿಸಿದರೂ ಅದು ಗ್ರಾಹಕರಲ್ಲಿ ಹೆಚ್ಚು ಪರಿಣಾಮ ಬೀರಿಲ್ಲ. ಅಷ್ಟೇ ಯಾಕೆ ಎಪ್ರಿಲ್ ತಿಂಗಳಲ್ಲಿ ಕೇವಲ 115 ಯುನಿಟ್ ಮಾತ್ರ ಮಾರಾಟವಾಗಿದ್ದವು.
ಇನ್ನು ಸ್ಕೋಡಾ ಫಾಬಿಯಾ ರಿ ಎಂಟ್ರಿ ಕೊಡುವುದೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಒಟ್ಟಾರೆಯಾಗಿ ಸ್ಕೋಡಾ ಕಾರುಗಳು ದೇಶದಲ್ಲಿ ಗ್ರಾಹಕರ ಹತ್ತಿರ ತಲುಪುವಲ್ಲಿ ವಿಫಲವಾಗಿದೆ.


Click it and Unblock the Notifications









