ಹೊಸ ಸ್ಕೋಡಾ ಯೆಟಿ ಭರ್ಜರಿ ಲಾಂಚ್; ಮೋಡಿ ಮಾಡಿತೇ ?
ಜೆಕ್ ಗಣರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿರುವ ಸ್ಕೋಡಾ ಅತಿ ನೂತನ 2014 ಯೆಟಿ ಎಸ್‌ಯುವಿ ಕಾರನ್ನು ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೊಸ ಸ್ಕೋಡಾ ಯೆಟಿ ಭಾರತದಲ್ಲಿ ಮೋಡಿ ಮಾಡಿತೇ ಎಂಬುದು ವಾಹನ ಪ್ರಿಯರ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಎಲ್ಲ ಹೊಸತನಗಳಿಂದ ಕೂಡಿರುವ ಹೊಸ ಸ್ಕೋಡಾ ಯೆಟಿ, ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಸ್ಕೋಡಾ ನಿರೀಕ್ಷಿಸಿದಷ್ಟು ಯಶ ಸಾಧಿಸಿಲ್ಲ. ಹಾಗಿರುವಾಗ ಮೊದಲ ಬಾರಿಗೆ 2014ರ ಆಟೋ ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿದ್ದ ಯೆಟಿ ಹೊಸ ನಿರೀಕ್ಷೆಗೆ ಕಾರಣವಾಗಿದೆ.

ಬೈ ಕ್ಸೆನಾನ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಡೈ ಟೈಮ್ ರನ್ನಿಂಗ್ ಲೈಂಟ್ಸ್ , ವಿಶಿಷ್ಟ ಶೈಲಿಯ ಫಾಗ್ ಲ್ಯಾಂಪ್ ವಿನ್ಯಾಸ, ಟೈಲ್ ಲೈಟ್ ಮತ್ತು ಹೊಸ ಸ್ಟೈಲಿಷ್ ಅಲಾಯ್ ವೀಲ್‌ಗಳು ಸ್ಕೋಡಾವನ್ನು ಇನ್ನಷ್ಟು ಅಂದವಾಗಿಸಲಿದೆ.

ಇನ್ನು ಕಾರಿನ ಒಳಾಂಗಣವನ್ನು ಗಮನಿಸಿದರೆ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಬದಲಾವಣೆ ಪಡೆದುಕೊಂಡಿದೆ. ಇದು 3 ಸ್ಪೋಕ್ ಸ್ಟೀರಿಂಗ್ ವೀಲ್, ಬ್ಲೂಟೂತ್ ಟೆಲಿಫೋನಿ, ಕೀಲೆಸ್ ಎಂಟ್ರಿ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಚಾಲಕ ಸೀಟು, ಕ್ಲೂಸ್ ಕಂಟ್ರೋಲ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಟೈರ್ ಒತ್ತಡ ಮಾನಿಟರಿಂಗ್ ಸಿಸ್ಟಂ ಮುಂತಾದ ಸೌಲಭ್ಯಗಳನ್ನು ಪಡೆಯಲಿದೆ.

ಅದೇ ರೀತಿ ಸುರಕ್ಷತೆಗೂ ಆದ್ಯತೆ ಕೊಡಲಾಗಿದ್ದು, ಆರು ಏರ್ ಬ್ಯಾಗ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ವ್ಯವಸ್ಥೆಯಿರಲಿದೆ.

ಅಂದ ಹಾಗೆ 2014 ಸ್ಕೋಡಾ ಯೆಟಿ 2 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 4x2 ಮತ್ತು 4x4 ವೆರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗಿದ್ದರೂ ನೀವು ಪೆಟ್ರೋಲ್ ವೆರಿಯಂಟ್ ಮಿಸ್ ಮಾಡಿಕೊಳ್ಳಲಿದ್ದೀರಿ.

ಇದರ ಫ್ರಂಟ್ ವೀಲ್ ಡ್ರೈವ್ ವರ್ಷನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದ್ದು 110 ಪಿಎಸ್ ಪವರ್ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅದೇ ರೀತಿ 4x4 ವೆರಿಯಂಟ್ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದ್ದು, 140 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲೂ ಲಭ್ಯವಾಗಲಿದೆ.

ಭಾರತದಲ್ಲಿ ಸ್ಕೋಡಾ ಯೆಟಿ ಮಾದರಿಯು ರೆನೊ ಡಸ್ಟರ್ 4x4 ಮಾದರಿಯ ಸವಾಲನ್ನು ಎದುರಿಸಲಿದೆ. ಹಾಗಿದ್ದರೂ ಡಸ್ಟರ್‌ನ ಈ ಮಾದರಿಗೆ ಹೋಲಿಸಿದರೆ ಸ್ಕೋಡಾ ಸ್ವಲ್ಪ ದುಬಾರಿಯೆನಿಸಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಮಹಾರಾಷ್ಟ್ರ)
4x2 ವೆರಿಯಂಟ್ - 18.63 ಲಕ್ಷ ರು.
4x4 ವೆರಿಯಂಟ್ - 20.14 ಲಕ್ಷ ರು.


Click it and Unblock the Notifications








