2015 ಫೋಕ್ಸ್‌ವ್ಯಾಗನ್ ಜೆಟ್ಟಾ ಅನಾವರಣ; ಬಿಡುಗಡೆಗೆ ರೆಡಿ
ಇತ್ತೀಚೆಗಷ್ಟೇ ಜರ್ಮನಿ ಮೂಲದ ಫೋಕ್ಸ್‌ವ್ಯಾಗನ್ ಇಂಡಿಯಾ ಸಂಸ್ಥೆಯು ಪೊಲೊ ಹ್ಯಾಚ್‌ಬ್ಯಾಕ್ ಕಾರನ್ನು ಪರಿಷ್ಕೃತಗೊಳಿಸಿತ್ತು (ಇಲ್ಲಿದೆ ಓದಿ). ಇದರ ಬೆನ್ನಲ್ಲೇ ತನ್ನೆಲ್ಲ ಮಾದರಿಗಳ ಹೊಸ ರೂಪಗಳನ್ನು ಪರಿಚಯಿಸಲು ಹೊರಟಿದೆ.
ಇದರಂತೆ ಅಂತರಾಷ್ಟ್ರೀಯ ಮಾರುಕಟ್ಟೆಗಾಗಿ ಫೇಸ್‌ಲಿಫ್ಟ್ ಜೆಟ್ಟಾ ಕಾರನ್ನು ಅನಾವರಣಗೊಳಿಸಿರುವ ಜರ್ಮನಿಯ ಈ ದೈತ್ಯ ವಾಹನ ತಯಾರಕ ಸಂಸ್ಥೆಯು ಮುಂದಿನ ವರ್ಷಾರಂಭದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

2014 ಫೋಕ್ಸ್‌ವ್ಯಾಗನ್ ಜೆಟ್ಟಾ ಕಾರಿನ ಒಳಗೂ ಹೊರಗೂ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಇದು ಹೆಚ್ಚು ಶಕ್ತಿಶಾಲಿ ಜಿಟಿ ಆಯ್ಕೆಯಲ್ಲಿ ಆಗಮನವಾಗುವ ನಿರೀಕ್ಷೆಯಿದ್ದು ಹೆಚ್ಚು ಆರಾಮದಾಯಕ ಚಾಲನೆ ನೀಡಲಿದೆ.
ಈ ಹಿಂದೆ ಎಪ್ರಿಲ್ ತಿಂಗಳಲ್ಲಿ ನಡೆದ ನ್ಯೂಯಾರ್ಕ್ ಆಟೋ ಶೋದಲ್ಲಿ 2015 ಜೆಟ್ಟಾ ಅನಾವರಣಗೊಳಿಸಲಾಗಿತ್ತು. ಇದು ಸುಧಾರಿತ ಏರೋಡೈನಾಮಿಕ್ಸ್, ಪರಿಷ್ಕೃತ ಬಂಪರ್ ಪಡೆದುಕೊಂಡಿದೆ. ಅಲ್ಲದೆ ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿಯೂ ಹೊಸ ಕಾರು ಸಕ್ಷಮವಾಗಲಿದೆ. ಇನ್ನು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಜೊತೆಗೆ ರಿಯಲ್ ಟ್ರಾಫಿಕ್ ಅಲರ್ಟ್ ಹೆಚ್ಚು ಸುರಕ್ಷಿತವಾಗಿಸಲಿದೆ.

ಎಂಜಿನ್ ಆಯ್ಕೆ
ಪೆಟ್ರೋಲ್ ಹಾಗೂ ಡೀಸೆಲ್‌ಗಳೆಂಬ ಎರಡು ಎಂಜಿನ್ ಆಯ್ಕೆಗಳಲ್ಲಿ 2015 ಜೆಟ್ಟಾ ಲಭ್ಯವಾಗಲಿದೆ. ಇದರ 1.4 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ 125 ಅಶ್ವಶಕ್ತಿ ಉತ್ಪಾದಿಸಲಿದ್ದು, 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆಯಲಿದೆ. ಇದೇ ಎಂಜಿನ್ ಇನ್ನು ಹೆಚ್ಚು ಟ್ಯೂನ್ ಮಾಡಲಾಗಿದ್ದು, 150 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಡಿಎಸ್‌ಜಿ ಯುನಿಟ್‌ಗಳಿಂದ ನಿಯಂತ್ರಿಸ್ಪಡಲಿದೆ.
ಅದೇ ರೀತಿ ಡೀಸೆಲ್ 2.0 ಲೀಟರ್ ಟಿಡಿಐ ಎಂಜಿನ್ ಸಹ ಎರಡು ಟ್ಯೂನ್‌ಗಳಲ್ಲಿ ಲಭಿಸಲಿದೆ. ಇದು 110 (5 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಡಿಎಸ್‌ಜಿ ಟ್ರಾನ್ಸ್‌ಮಿಷನ್) ಹಾಗೂ 150 ಅಶ್ವಶಕ್ತಿ (6 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಡಿಎಸ್‌ಜಿ ಟ್ರಾನ್ಸ್‌ಮಿಷನ್) ಉತ್ಪಾದಿಸಲಿದೆ.
ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಮುಂದಿನ ವರ್ಷಾರಂಭದಲ್ಲಿ 2015 ಫೋಕ್ಸ್‌ವ್ಯಾಗನ್ ಜೆಟ್ಟಾ ಬಿಡುಗಡೆಯಾಗುವ ಸಂಭವವಿದೆ. ಇದು 12ರಿಂದ 18 ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications








