ಹ್ಯುಂಡೈ ಇಯಾನ್ 1.0 ಲೀಟರ್ ಎಂಜಿನ್ ಎಂಟ್ರಿ
ಈ ಹಿಂದೆ ಉಲ್ಲೇಖಿಸಿರುವಂತೆಯೇ ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ, 1.0 ಲೀಟರ್ ಎಂಜಿನ್‌ನೊಂದಿಗೆ ತನ್ನ ಜನಪ್ರಿಯ ಇಯಾನ್ ಕಾರನ್ನು ಪರಿಚಯಿಸಿದೆ. ಅಂತೆಯೇ ಆಸಕ್ತ ಗ್ರಾಹಕರು ನೂತನ ಕಾರಿಗಾಗಿ ಬುಕ್ಕಿಂಗ್ ಸಲ್ಲಿಸಬಹುದಾಗಿದೆ.
ಇದುವರೆಗೆ ಹ್ಯುಂಡೈ ಇಯಾನ್ ಸಣ್ಣ ಕಾರು 56 ಅಶ್ವಶಕ್ತಿ ಉತ್ಪಾದಿಸಬಲ್ಲ (74 ಎನ್‌ಎಂ ಟಾರ್ಕ್) 0.8 ಲೀಟರ್ ಎಂಪಿಐ ಎಂಜಿನ್‌ನಲ್ಲಿ ಮಾತ್ರ ಲಭ್ಯವಾಗಿತ್ತು. ಇದೀಗ ನೂತನ 1.0 ಲೀಟರ್ ಎಂಜಿನ್ 65 ಅಶ್ವಶಕ್ತಿ (95 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ನೂತನ ಆವೃತ್ತಿಯು ಮಾರುತಿ ಆಲ್ಟೊ ಕೆ10 ಹಾಗೂ ದಟ್ಸನ್ ಗೊ ವಿರುದ್ಧದ ಪೈಪೋಟಿಯನ್ನು ಇನ್ನಷ್ಟು ತೀವ್ರಗೊಳಿಸಲಿದೆ. ಯಾಕೆಂದರೆ ಆಲ್ಟೊ ಕೆ10 ಹಾಗೂ ದಟ್ಸನ್ ಗೊದಲ್ಲಿ ಅನುಕ್ರಮವಾಗಿ 1.0 ಹಾಗೂ 1.2 ಲೀಟರ್ ಎಂಜಿನ್ ಆಳವಡಿಸಲಾಗಿದೆ.
ಅಂದ ಹಾಗೆ 1.0 ಲೀಟರ್ ಎಂಜಿನ್ ಹ್ಯುಂಡೈ ಇಯಾನ್ ಮಿಡ್ ವೆರಿಯಂಟ್ ಮ್ಯಾಗ್ನಾದಲ್ಲಿ ಮಾತ್ರ ಲಭ್ಯವಾಗಲಿದೆ. ಇದರಲ್ಲಿ ಎಸಿ, ಪವರ್ ಸ್ಟೀರಿಂಗ್, ಫ್ರಂಟ್ ಪವರ್ ವಿಂಡೋ, ಎಂಜಿನ್ ಇಂಮೊಬಿಲೈಜರ್ ಮತ್ತು ಕೀಲೆಸ್ ಎಂಟ್ರಿಗಳಂತಹ ವೈಶಿಷ್ಟ್ಯಗಳು ಸ್ಟಾಂಡರ್ಡ್ ಆಗಿ ದೊರಕಲಿವೆ. ಹಾಗಿದ್ದರೂ ಆಡಿಯೋ ಸಿಸ್ಟಂ ಕೊರತೆ ಕಾಡಲಿದೆ.
ಪ್ರಸ್ತುತ ಹ್ಯುಂಡೈ 1.0 ಲೀಟರ್ ಮ್ಯಾಗ್ನಾ ವೆರಿಯಂಟ್ ಬುಕ್ಕಿಂಗ್ ಪ್ರಕ್ರಿಯೆ ತೆರೆದುಕೊಂಡಿದೆ. ಇದರ ಮುಂಬೈ ಎಕ್ಸ್ ಶೋ ರೂಂ ದರ 3.85 ಲಕ್ಷ ರು.ಗಳಾಗಿದ್ದು, ಮುಂದಿನ ತಿಂಗಳಿಂದ ವಿತರಣೆ ನಡೆಯಲಿದೆ.


Click it and Unblock the Notifications








