ಲಂಬೋರ್ಗಿನಿ ಕೌಂಟೆಕ್ ಬರೋಬ್ಬರಿ 7 ಕೋಟಿಗೆ ಹರಾಜು
ವಿರಳದಲ್ಲಿ ಅತಿ ವಿರಳವಾಗಿರುವ ಕಾರುಗಳು ಅತ್ಯಂತ ಹೆಚ್ಚು ಮೌಲ್ಯಕ್ಕೆ ಮಾರಾಟವಾಗುವುದು ಸಾಮಾನ್ಯ ಸಂಗತಿ. ಇದೀಗ ಇಟಲಿಯ ಐಕಾನಿಕ್ ಸೂಪರ್ ಕಾರು ಸಂಸ್ಥೆಯಾಗಿರುವ ಲಂಬೋರ್ಗಿನಿಯ ಅತ್ಯಂತ ಜನಪ್ರಿಯ ಕೌಂಟೆಕ್ ಮಾದರಿಯು ಬರೋಬ್ಬರಿ 7.1 ಕೋಟಿ ರು.ಗಳಿಗೆ (1.2 ಮಿಲಿಯನ್ ಅಮೆರಿಕನ್ ಡಾಲರ್) ಹರಾಜಾಗಿದೆ.
ಲಂಬೋರ್ಗಿನಿಯ ಹಳೆಯ ರೇಸ್ ಕಾರುಗಳಲ್ಲಿ ಒಂದಾಗಿರುವ ಕೌಂಟೆಕ್, ಪ್ರಮುಖವಾಗಿಯೂ ಫೆರಾರಿ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿತ್ತು. ಇದೀಗ ಈ ಕ್ಲಾಸಿಕ್ ಕಾರು ಅತ್ಯಂತ ಹೆಚ್ಚಿನ ಮೌಲ್ಯ ಗಿಟ್ಟಿಸಿಕೊಂಡಿರುವುದು ವಾಹನ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

2014 ಗ್ರೀನ್‌ವಿಚ್ ಕಾನ್ಕರ್ಸ್ ಡಿಎಲೆಗನ್ಸ್ ಹರಾಜಿನಲ್ಲಿ ಲಂಬೋರ್ಗಿನಿ ಕೌಂಟೆಕ್ ಆವೃತ್ತಿಗೆ ಅತಿ ಹೆಚ್ಚಿನ ಮೌಲ್ಯ ಪ್ರಾಪ್ತಿಯಾಗಿದೆ.

ಇದು 1975ನೇ ಇಸವಿಯ ಲಂಬೋರ್ಗಿನಿ ಮಾದರಿಯಾಗಿದ್ದು, ಕೌಂಟೆಕ್ ಎಲ್‌ಪಿ400 ಪೆರಿಸ್ಕಾಪಿಕಾ ಎಂದು ಹೆಸರಿಸಿಕೊಂಡಿದೆ.

1974 ಹಾಗೂ 1977ನೇ ಇಸವಿಯ ನಡುವೆ ನಿರ್ಮಿಸಲ್ಪಟ್ಟ 150 ಯುನಿಟ್‌ಗಳಿಗೆ ಪೆರಿಸ್ಕಾಪಿಕಾ ಹೆಸರನ್ನಿಡಲಾಗಿತ್ತು.

ಇಂತಹ ಮಾದರಿಗಳು ವಿಶೇಷವಾದ ಪೆರಿಸ್ಕಾಪಿಕಾ ರಿಯರ್ ವ್ಯೂ ಮಿರರ್ ಹೊಂದಿದ್ದು, ಕೌಂಟೆಕ್ ಹಿಂದುಗಡೆ ನೋಟದ ಸಮಸ್ಯೆಗೆ ಪರಿಹಾರವಾಗಿದೆ.

16,500 ಕೀ.ಮೀ.ಗಳಷ್ಟು ಮಾತ್ರ ಸಂಚರಿಸಿರುವ ಈ ಕಾರು ಜಗತ್ತಿನ ಅತ್ಯಂತ ವಿರಳ ಮಾದರಿಗಳಲ್ಲಿ ಒಂದಾಗಿದೆ.

ನೀಲಿ ಬಣ್ಣದ ಹೊರಮೈ ಪಡೆದುಕೊಂಡಿರುವ 1975 ಲಂಬೋರ್ಗಿನಿ ಕೌಂಟೆಕ್ ಎಲ್‌ಪಿ400 ಪೆರಿಸ್ಕಾಪಿಯಾ, ಲೆಥರ್ ಇಂಟಿರಿಯರ್ ಪಡೆದುಕೊಂಡಿದೆ.

ಸ್ವಿಜರ್ಲೆಂಡ್‌ನ ಜ್ಯೂರಿಕ್ ತಲಹದಿಯ ವ್ಯಕ್ತಿಗೆ ಮೊದಲು ಮಾರಾಟವಾಗಿದ್ದ ಈ ಕಾರು ಬಳಿಕ ಅಮೆರಿಕಕ್ಕೆ ಸ್ಥಳಾಂತರವಾಗಿತ್ತು.

ಕೊನೆಯ ಬಾರಿ ಕಳೆದ ವರ್ಷ ಬೋನ್ಹಾಮ್ಸ್ ಹರಾಜಿನಲ್ಲಿ ಹರಾಜಿಗಿಟ್ಟಾದ 8.36 ಲಕ್ಷ ಅಮೆರಿಕನ್ ಡಾಲರ್ ಸಂಪಾದಿಸಿತ್ತು.

ನಾಲ್ಕು ವರ್ಷಗಳ ಹಿಂದೆ ಅಂದರೆ 2010ರಲ್ಲಿ ಇದರ ಮೌಲ್ಯ 3.36 ಲಕ್ಷ ಅಮೆರಿಕನ್ ಡಾಲರ್ ಆಗಿತ್ತು. ಅಂದರೆ ನಾಲ್ಕು ವರ್ಷಗಳಲ್ಲೇ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ.

ಅಂದ ಹಾಗೆ 1975 ಲಂಬೋರ್ಗಿನಿ ಕೌಂಟೆಕ್ ಎಲ್‌ಪಿ400 ಪೆರಿಸ್ಕಾಪಿಯಾ 4.0 ಲೀಟರ್ ಡಿಎಚ್‌ಸಿಸಿ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 375 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.


Click it and Unblock the Notifications








