ಮರ್ಸಿಡಿಸ್ ಬೆಂಝ್ ಸಿಎಲ್‌ಎ45 ಎಎಂಜಿ ಬಿಡುಗಡೆಗೆ ಸಿದ್ಧ
ಈ ಹಿಂದೆ 2014ನೇ ಸಾಲಿನಲ್ಲಿ 10 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಮರ್ಸಿಡಿಸ್ ಬೆಂಝ್, ಮಗದೊಂದು ಆಕರ್ಷಕ ಮಾದರಿಯನ್ನು ದೇಶದ ಶ್ರೀಮಂತ ಗ್ರಾಹಕರಿಗಾಗಿ ಸಿದ್ಧಗೊಳಿಸುತ್ತಿದೆ.
ಇತ್ತೀಚೆಗಷ್ಟೇ ಎಡಿಷನ್ 1 ಎ ಕ್ಲಾಸ್ ಹಾಗೂ ಬಿ ಕ್ಲಾಸ್ ಪರಿಚಯಿಸಿದ್ದ ಬೆಂಝ್, ತದಾ ಬೆನ್ನಲ್ಲೇ ಸಿಎಲ್‌ಎಸ್ 350 ಬಿಡುಗಡೆ ಮಾಡಿತ್ತು. ಇದೀಗ ಮುಂಬರುವ ಜುಲೈ 22ರಂದು ಮಗದೊಂದು ಎಎಂಜಿ ವರ್ಷನ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, 2014 ಜುಲೈ 22ರಂದು ಬಹುನಿರೀಕ್ಷಿತ ಸಿಎಲ್‌ಎ45 ಎಎಂಜಿ ಕಾರನ್ನು ಬಿಡುಗಡೆ ಮಾಡಲಿದೆ.
ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಕ್ಕಿರಿಸಿದ್ದ ಸಿಎಲ್‌ಎ45 ಎಎಂಜಿ ಅತ್ಯಂತ ಶಕ್ತಿಶಾಲಿ ಕಾಂಪಾಕ್ಟ್ ಸೆಡಾನ್ ಕಾರಾಗಿದೆ. ಇದು 2.0 ಲೀಟರ್ ಡೈರಕ್ಟ್ ಇಂಜೆಕ್ಷನ್ ಟರ್ಬೊಚಾರ್ಜ್ಡ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ ಆಲ್ ವೀಲ್ ಡ್ರೈವ್ ಸಿಸ್ಟಂ ಜೊತೆಗೆ 7 ಸ್ಪೀಡ್ ಎಎಂಜಿ ಸ್ಪೀಡ್‌ಶಿಫ್ಟ್ ಟ್ರಾನ್ಸ್‌ಮಿಷನ್ ಸಹ ಹೊಂದಿರಲಿದೆ.

ಬೆಂಝ್ ಸಿಎಲ್‌ಎ45 ಎಎಂಜಿ ಕಾರು 355 ಅಶ್ವಶಕ್ತಿ (450 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಕೇವಲ 4.6 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಹಾಗೆಯೇ ಗರಿಷ್ಠ ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಸಂಸ್ಥೆಯ ಪ್ರಕಾರ ಬೆಂಝ್ ಎಎಂಜಿ ವಾಹನ ಪ್ರತಿ ಲೀಟರ್‌ಗೆ 14.08 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.
ಸಾಮಾನ್ಯ ಸಿಎಲ್‌ಎ ಮಾದರಿಗಳನ್ನು ಪರಿಗಣಿಸಿದರೆ ಸಿಎಲ್‌ಎ45 ಎಎಂಜಿ ಹೆಚ್ಚು ಏರೋಡೈನಾಮಿಕ್ ಪ್ಯಾಕೇಜ್ ಪಡೆಯಲಿದೆ. ಕಾರಿನ ಭಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಕಾರ್ಬನ್ ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದೆ. ಬೆಂಝ್ ಸಂಸ್ಥೆಯು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮೂಲಕ ಈ ಐಷಾರಾಮಿ ಕಾರನ್ನು ದೇಶಕ್ಕೆ ಕರೆ ತರಲಿದೆ. ಇದು 40ರಿಂದ 50 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.


Click it and Unblock the Notifications








