ದೇಶದಲ್ಲಿ ಆಕ್ರಮಣಕಾರಿ ಯೋಜನೆ ಹಮ್ಮಿಕೊಳ್ಳಲಿರುವ ನಿಸ್ಸಾನ್
ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಭಾರತದಲ್ಲಿ ಆಕ್ರಮಣಕಾರಿ ಯೋಜನೆ ಹಮ್ಮಿಕೊಳ್ಳಲು ನಿರ್ಧರಿಸಿದೆ. ಇದರಲ್ಲಿ ಪ್ರಮುಖವಾಗಿಯೂ ಈಗಿರುವ ಮಾದರಿಗಳನ್ನು ಪರಿಷ್ಕೃತಗೊಳಿಸುವುದು, ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ದೇಶದ್ಯಾಂತ ಡೀಲರ್‌ಶಿಪ್ ಜಾಲ ವೃದ್ಧಿಸುವುದು ನಿಸ್ಸಾನ್ ಯೋಜನೆಯಲ್ಲಿದೆ.
ಇತ್ತೀಚೆಗಷ್ಟೇ ಮುಂಬೈನಲ್ಲಿ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಕೇಂದ್ರ ಉದ್ಘಾಟನೆ ಮಾಡುತ್ತಾ ಮಾತನಾಡಿದ್ದ ನಿಸ್ಸಾನ್ ಮೋಟಾರು ಕಂಪನಿ ಲಿಮಿಟೆಡ್ ಹಿರಿಯ ಉಪಾಧ್ಯಕ್ಷ ತಕಾಶಿ ಹಟಾ, ಕಳೆದ ಕೆಲವು ಸಮಯಗಳಿಂದ ಗ್ರಾಹಕರು ಹೆಚ್ಚೆಚ್ಚು ನಿಸ್ಸಾನ್ ಶೋ ರೂಂಗಳತ್ತ ಆಗಮಿಸುತ್ತಿದ್ದು, ಇದೊಂದು ಉತ್ತಮ ಸಂಕೇತವಾಗಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಚೆನ್ನೈನ ಓರಗಡಂ ಘಟಕದಲ್ಲಿನ ನಿರ್ಮಾಣ ಸಾಮರ್ಥ್ಯವನ್ನು 4 ಲಕ್ಷ ಯುನಿಟ್‌ಗಳಿಂದ 4.80 ಲಕ್ಷ ಯುನಿಟ್‌ಗಳಿಗೆ ಏರಿಸುವ ಬಗ್ಗೆಯು ತಕಾಶಿ ಸೂಚನೆ ನೀಡಿದರು. ಈ ಮೂಲಕ ದೇಶಿಯ ಮಾರಾಟಕ್ಕೆ ಉತ್ತೇಜನ ನೀಡಲಾಗುವುದು.
ಈಗಾಗಲೇ ಡೀಲರ್‌ಶಿಪ್ ಜಾಲವನ್ನು 120ರಿಂದ 200ಕ್ಕೆ ಏರಿಕೆಗೊಳಿಸಿರುವ ನಿಸ್ಸಾನ್, ಇನ್ನಷ್ಟು ಪ್ರಗತಿ ಗಳಿಸುವ ನಿರೀಕ್ಷೆಯಲ್ಲಿದೆ. ಹಾಗೆಯೇ ಇತ್ತೀಚೆಗಷ್ಟೇ ಲಾಂಚ್ ಆಗಿರುವ ದಟ್ಸನ್ ಗೊ ಉತ್ತಮ ಬೇಡಿಕೆ ಕಾಯ್ದುಕೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ನಿಸ್ಸಾನ್ ಮಾರಾಟ ಕಳಪೆ ಮಟ್ಟದಲ್ಲಿದೆ. ನಾವಿದನ್ನು ಸುಧಾರಣೆ ತರುವ ಅಗತ್ಯವಿದೆ. ವಾಹನ ಮಾರಾಟ ನಂತರದ ಸೇವೆಯಲ್ಲಿ ಮಾರುತಿ ಮುಂದಿದೆ. ನಾವಿದರತ್ತ ಹೆಚ್ಚು ಗಮನ ಕೇಂದ್ರಿತರಾಗಬೇಕಾಗಿದ್ದು, ಗ್ರಾಹಕರ ಭಾವನೆಗಳನ್ನು ಅರಿತುಕೊಳ್ಳಬೇಕಾಗಿದೆ. ನಮ್ಮ ಉತ್ಪನ್ನಗಳ ಮೂಲಕ ನಾವಿದನ್ನು ತಲುಪುವ ನಂಬಿಕೆಯಲ್ಲಿದ್ದೇವೆ ಎಂದು ಹಟಾ ತಿಳಿಸಿದರು.


Click it and Unblock the Notifications








