ಟಾಟಾ ಕೈಟ್ ಸೆಲೆರಿಯೊಗಿಂತಲೂ ಉತ್ತಮ ಕಾರು?
ಇನ್ನಷ್ಟೇ ಆಗಮನವಾಗಬೇಕಾಗಿರುವ ಟಾಟಾ ಕೈಟ್ ಈಗಾಗಲೇ ಮಾಧ್ಯಮ ಸುದ್ದಿಗಳ ಕೇಂದ್ರ ಬಿಂದುವಾಗಿಬಿಟ್ಟಿದೆ. ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಿಂದ ಆಗಮನವಾಗಲಿರುವ ಈ ಬಹುನಿರೀಕ್ಷಿತ ಕಾರು, ಪ್ರಸ್ತುತ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಾರುತಿ ಸುಜುಕಿ ಸೆಲೆರಿಯೊ ಆವೃತ್ತಿಗಿಂತಲೂ ಉತ್ತಮವಾಗಿರಲಿದೆ ಎಂಬುದು ಸದ್ಯದ ಬಿಸಿ ಬಿಸಿ ಸುದ್ದಿ.
ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಮಾದರಿಯಲ್ಲಿ ಪ್ರದರ್ಶಿಸಿದ್ದ ಸೆಲೆರಿಯೊ ಅತಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುತ್ತಿದೆ. ಸದ್ಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ದೊರಕುವ ಆಟೋಮ್ಯಾಟಿಕ್ ಕಾರೆಂಬ ಹೆಗ್ಗಳಿಕೆಗೂ ಸೆಲೆರಿಯೊ ಪಾತ್ರವಾಗಿದೆ.

ಇವೆಲ್ಲಕ್ಕೂ ಟಾಟಾ ಮುಂಬರುವ ಕೈಟ್ ಆವೃತ್ತಿಯಿಂದ ತಕ್ಕ ಪ್ರತ್ಯುತ್ತರ ದೊರಕಲಿದೆ. ಈ ನಡುವೆ ಬೋಲ್ಟ್ ಹ್ಯಾಚ್‌ಬ್ಯಾಕ್ ಹಾಗೂ ಜೆಸ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿರುವ ಟಾಟಾ ಸಂಸ್ಥೆಯು ಮುಂದಿನ ವರ್ಷ ಎಲ್ಲ ಹೊಸತನದಿಂದ ಕೂಡಿರುವ ಕೈಟ್ ಕಾರನ್ನು ಪರಿಚಯಿಸಲಿದೆ. ಬಲ್ಲ ಮೂಲಗಳ ಪ್ರಕಾರ, ಟಾಟಾ ಕೈಟ್ ಮಾರುತಿಯ ಸೆಲೆರಿಯೊಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ. ಇದು ಸಣ್ಣದಾದ 1,000 ಸಿಸಿ ಎಂಜಿನ್ ಪಡೆದುಕೊಳ್ಳಲಿದ್ದು, ಟಾಟಾ ನ್ಯಾನೋ ಹಾಗೂ ಇಂಡಿಕಾ ನಡುವಿನ ಸ್ಥಾನದಲ್ಲಿ ಗುರುತಿಸಿಕೊಳ್ಳಲಿದೆ.
ಈ ಸಂಬಂಧ ಇಟಲಿಯ ಮ್ಯಾಗ್ನೆಟಿ ಮರೆಲ್ಲಿ ಜೊತೆ ಕೆಲಸ ಮಾಡಲಿರುವ ಟಾಟಾ, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಳವಡಿಸಲಿದೆ. ಫಾರ್ಮುಲಾ ಒನ್ ಜೊತೆಗೆ ಮೋಟಾರುಸ್ಪೋರ್ಟ್ಸ್ ಕಾರುಗಳಿಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಒದಗಿಸುವುದರಲ್ಲಿ ಹೆಸರುವಾಸಿಯಾಗಿರುವ ಪ್ರಸ್ತುತ ಸಂಸ್ಥೆಯು ನ್ಯಾನೋ ಟ್ವಿಸ್ಟ್ ಆವೃತ್ತಿಯಲ್ಲೂ ಇದನ್ನು ಆಳವಡಿಸುವ ಸಾಧ್ಯತೆಯಿದೆ.
ಗುಜರಾತ್‌ನ ಸನಂದ್ ಘಟಕದಲ್ಲಿ ಕೈಟ್ ಹ್ಯಾಚ್‌ಬ್ಯಾಕ್ ಉತ್ಪಾದನೆಯಾಗುವ ಸಂಭವವಿದೆ. ಇವೆಲ್ಲವೂ ಟಾಟಾ ಕಾರುಗಳ ಗುಣಮಟ್ಟದ ವೃದ್ಧಿ ಜೊತೆಗೆ ಮಾರಾಟ ಹೆಚ್ಚಳಕ್ಕೆ ಕಾರಣವಾಗುವ ನಿರೀಕ್ಷೆಯಿದೆ.


Click it and Unblock the Notifications








