ಇನ್ನು ಟೊಯೊಟಾ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಏರ್ ಬ್ಯಾಗ್
ಸ್ವಾಗತಾರ್ಹ ಬೆಳವಣಿಗೆಯೊಂದರಲ್ಲಿ ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, ತನ್ನೆಲ್ಲ ಮಾದರಿಗಳಲ್ಲೂ ಏರ್‌ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ಆಳವಡಿಸಲು ನಿರ್ಧರಿಸಿದೆ.
ಭಾರತದಲ್ಲಿ ಅಪಘಾತ ಪರೀಕ್ಷೆ ಕಡ್ಡಾಯ ಮಾಡುವ ಕುರಿತಂತೆ ಗಂಭೀರ ಚಿಂತನೆಗಳು ಜಾರಿಯಲ್ಲಿರುವಂತೆಯೇ ಟೊಯೊಟಾದಿಂದ ಇಂತಹದೊಂದು ಗಮನಾರ್ಹ ಬೆಳವಣಿಗೆ ಕಂಡುಬಂದಿದೆ.

ದೇಶದಲ್ಲಿರುವ ಬಹುತೇಕ ಸಣ್ಣ ಕಾರುಗಳಲ್ಲಿ ಏರ್ ಬ್ಯಾಗ್ ಸಮಸ್ಯೆ ಕಾಡುತ್ತಿದೆ. ಅಲ್ಲದೆ ಇನ್ನಿತರ ವಾಹನ ತಯಾರಿಕ ಸಂಸ್ಥೆಗಳು ಐಚ್ಛಿಕ ರೂಪದಲ್ಲಿ ಮಾತ್ರ ಏರ್ ಬ್ಯಾಗ್ ಆಯ್ಕೆಯನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಟೊಯೊಟಾ ಸಂಸ್ಥೆಯು ಏರ್ ಬ್ಯಾಗ್ ಸ್ಟ್ಯಾಂಡರ್ಡ್ ವೈಶಿಷ್ಟ್ಯದ ರೂಪದಲ್ಲಿ ಒದಗಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.
ಕಳೆದ ಕೆಲವು ಸಮಯಗಳಿಂದ ಯುರೋ ಎನ್‌ಸಿಪಿ ನಡೆಸುತ್ತಿರುವ ಅಪಘಾತ ಪರೀಕ್ಷೆಯಲ್ಲಿ (Crash Test) ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ವೈಫಲ್ಯವನ್ನು ಅನುಭವಿಸಿದ್ದವು. ಮಾರುತಿಯ ಸ್ವಿಫ್ಟ್, ದಟ್ಸನ್ ಗೊ, ಸುಜುಕಿ ಆಲ್ಟೊ, ಟಾಟಾ ನ್ಯಾನೋ, ಫೋರ್ಡ್ ಫಿಗೊ, ಹ್ಯುಂಡೈ ಐ10, ಫೋಕ್ಸ್‌ವ್ಯಾಗನ್ ಪೊಲೊ ಮಾದರಿಗಳು ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ವಿಫಲವಾಗಿದ್ದವು.
ಏತನ್ಮಧ್ಯೆ ತನ್ನತ್ತ ಬೊಟ್ಟು ಮಾಡಿ ತೋರಿಸಲು ಯಾವುದೇ ಅವಕಾಶ ಮುಂದಾಗದ ಟೊಯೊಟಾ ಸಂಸ್ಥೆಯು ಸ್ಟ್ಯಾಂಡರ್ಡ್ ರೂಪದಲ್ಲಿ ಏರ್ ಬ್ಯಾಗ್ ಜೋಡಣೆ ಮಾಡಲು ನಿರ್ಧರಿಸಿದೆ. ನಿಮ್ಮ ಮಾಹಿತಿಗಾಗಿ, ಎನ್‌ಸಿಎಪಿ ಅಪಘಾತ ಪರೀಕ್ಷೆಯ ಬೆನ್ನಲ್ಲೇ ಪೊಲೊ ಕಾರಿನಲ್ಲಿ ಏರ್‌ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ನೀಡಲು ಫೋಕ್ಸ್‌ವ್ಯಾಗನ್ ನಿರ್ಧರಿಸಿತ್ತು. ತದಾ ಬಳಿಕ ನಡೆದ ಅಪಘಾತ ಪರೀಕ್ಷೆಯಲ್ಲಿ 4 ಸ್ಟಾರ್ ಗಿಟ್ಟಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿತ್ತು.


Click it and Unblock the Notifications








