ಮುಂಬರುವ 15 ಕಾರುಗಳು; ನೀವೇಕೆ ಮಹತ್ವ ಕೊಡಬೇಕು?
ನೂತನ ಕಾರು ಖರೀದಿ ಮಾಡುವ ಅಥವಾ ಪ್ರಥಮ ಕಾರಿನಿಂದ ಹೆಚ್ಚಿನ ಸೌಲಭ್ಯಗಳ ದ್ವಿತೀಯ ಕಾರಿಗೆ ವರ್ಗಾವಣೆ ಪಡೆಯಲು ಇಚ್ಛಿಸುವ ಗ್ರಾಹಕರು ಸದಾ ಮುಂಬರುವ ಕಾರುಗಳತ್ತ ಹದ್ದಿನ ಕಣ್ಣಿಟ್ಟರೆ ಒಳ್ಳೆಯದು. ಯಾಕೆಂದರೆ ಲಕ್ಷಗಟ್ಟಲೆ ರುಪಾಯಿ ಖರ್ಚು ಮಾಡಿ ಒಂದು ಕಾರು ಖರೀದಿ ಬಳಿಕೆ ಛೆ! ನಾನು ಆ ಕಾರು ಖರೀದಿ ಮಾಡಬಹುದಿತ್ತು ಎಂದು ತಲೆಗೆ ಕೈಯಿಟ್ಟುಕೊಳ್ಳುವಂತಹ ಪೇಚಿನ ಪರಿಸ್ಥಿತಿ ಎದುರಾಗಬಾರದು.
ಹಾಗಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ನಿಕಟ ಭವಿಷ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ 15 ಬಹು ನಿರೀಕ್ಷಿತ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ. ಇದು ಹೊಸ ಕಾರು ಖರೀದಿ ಮಾಡುವ ಗ್ರಾಹಕರಿಗೆ ನೆರವಾಗುವ ನಂಬಿಕೆ ನಮ್ಮದ್ದು. ಇನ್ಯಾಕೆ ತಡ ಈಗಲೇ ನಮ್ಮ ಫೋಟೊ ಸ್ಲೈಡ್ ಗೆ ಭೇಟಿ ಕೊಡುತ್ತಾ ಒಂದೊಂದೇ ಕಾರುಗಳ ಮಾಹಿತಿಯನ್ನು ಪಡೆಯಿರಿ..

15 . ಸೆಲೆರಿಯೊ ಡೀಸೆಲ್
ಕಳೆದ ವರ್ಷ ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಸೆಲೆರಿಯೊ ಈಗ ಡೀಸೆಲ್ ವೆರಿಯಂಟ್ ಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಸೆಲೆರಿಯೊದಲ್ಲಿ ಆಳವಡಿಸಲಾಗಿರುವ ಮ್ಯಾನುವಲ್ ಆಟೋಮ್ಯಾಟಡ್ ಟ್ರಾನ್ಸ್ ಮಿಷನ್ ಅಥವಾ ಎಎಂಟಿ ತಂತ್ರಗಾರಿಕೆಯು ಅತಿ ಹೆಚ್ಚಿನ ಮಾರಾಟಕ್ಕೆ ಗ್ರಾಸವಾಗಿತ್ತು.

14. ಟಾಟಾ ಕೈಟ್
ಮಗದೊಂದು ಸಣ್ಣ ಕಾರಿನ ಅಭಿವೃದ್ಧಿಯಲ್ಲಿ ತೊಡಗಿರುವ ಟಾಟಾ ಇದನ್ನು ಕೈಟ್ ಎಂದು ಹೆಸರಿಸಿಕೊಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನು ಪರಿಗಣಿಸಿರುವ ಸಂಸ್ಥೆಯು ಕೈಟ್ ಕೋಡ್ ಹೆಸರಿನಲ್ಲಿ ನೂತನ ಮಾದರಿ ಅಭಿವೃದ್ಧಿಪಡಿಸುತ್ತಿದ್ದು, ಇದು ನ್ಯಾನೋ ಹಾಗೂ ಬೋಲ್ಟ್ ನಡುವೆ ಕಾಣಿಸಿಕೊಳ್ಳಲಿದೆ. ಇದರಲ್ಲಿ 800ಸಿಸಿ ಪೆಟ್ರೋಲ್ ಹಾಗೂ 1.02 ಲೀಟರ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ.

13. ಟೊಯೊಟಾ ಇನ್ನೋವಾ
ಉಪಯುಕ್ತ ವಿಭಾಗದಲ್ಲಿ ಭಾರಿ ಸದ್ದು ಮಾಡಿರುವ ಟೊಯೊಟಾ ಇನ್ನೋವಾ ನಿಕಟ ಭವಿಷ್ಯದಲ್ಲೇ ಹೊಸ ಸ್ವರೂಪ ಪಡೆಯಲಿದೆ. ಹಾಗಾಗಿ ಪ್ರೀಮಿಯಂ ಎಂಪಿವಿ ಖರೀದಿ ಮಾಡಲು ಇಚ್ಛಿಸುವವರು ಸ್ವಲ್ಪ ಕಾದು ಕುಳಿತರೆ ಉತ್ತಮ. ಯಾಕೆಂದರೆ ಇದು ಸಂಪೂರ್ಣ ಹೊಸ ವಿನ್ಯಾಸ ಪಡೆದುಕೊಳ್ಳುವ ಸಾಧ್ಯತೆಯಿದೆ.

12. ರೆನೊ ಸಣ್ಣ ಕಾರು
ಈಗಗಾಲೇ ಮಾಹಿತಿ ಕೊಟ್ಟಿರುವಂತೆಯೇ ಫ್ರಾನ್ಸ್ ಮೂಲದ ರನೊ ಸಂಸ್ಥೆಯು ಸಣ್ಣ ಕಾರೊಂದನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದು ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲದಿದ್ದರೂ ಪ್ರಮುಖವಾಗಿಯೂ ಎಂಟ್ರಿ ಲೆವೆಲ್ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿದೆ.

11. ಮಾರುತಿ ಕಾಂಪಾಕ್ಟ್ ಎಸ್ ಯುವಿ
ಈ ನಡುವೆ ಪ್ರೀಮಿಯಂ ವಿಭಾಗದಲ್ಲೂ ತನ್ನ ಸಾನಿಧ್ಯ ಗಟ್ಟಿ ಮಾಡಲು ಹೊರಟಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಸದ್ಯದಲ್ಲೇ ಕಾಂಪಾಕ್ಟ್ ಎಸ್ ಯುವಿ ಕಾರೊಂದನ್ನು ಬಿಡುಗಡೆ ಮಾಡಲಿದೆ. ಅದುವೇ ಅದುವೇ ವಿಟಾರಾ ಬ್ರೆಝಾ (Vitara Brezza). ಇದು ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಮಾದರಿಗಳಿಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ.

10. ಹೋಂಡಾ ಜಾಝ್
ಕಾದು ಕಾದು ಸಾಕಾಗಿ ಹೋಗಿದೆಯೇ? ಚಿಂತೆ ಬೇಡ ಕೊನೆಗೂ ಹೋಂಡಾ ಜಾಝ್ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದೆ ಎಂಬುದು ಸದ್ಯದ ಸುದ್ದಿ. ಈ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ದೇಶದ ಗ್ರಾಹಕರಿಗೆ ಹೊಸ ಅನುಭವವಾಗಿರಲಿದೆ.

9. ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ
ಐಎಕ್ಸ್25 ಮುಖಾಂತರ ಕಾಂಪಾಕ್ಟ್ ಎಸ್ ಯುವಿ ವಿಭಾಗಕ್ಕೆ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಕಾಲಿಡಲಿದೆ.

08. ಮಹೀಂದ್ರ ಕಾಂಪಾಕ್ಟ್ ಎಸ್‌ಯುವಿ
ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ದೇಶದ ಎಸ್‌ಯುವಿ ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ ಕೂಡಾ ಕಾಂಪಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

07. ಮಾರುತಿ ವೈಆರ್ ಎ ಪ್ರೀಮಿಯಂ ಹ್ಯಾಚ್ ಬ್ಯಾಕ್
ಮಾರುತಿ ವೈಆರ್ ಎ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹ್ಯುಂಡೈ ಗ್ರಾಂಡ್ ಐ20 ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ. ಸ್ವಿಫ್ಟ್ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಹೊಸ ಕಾರು, ಐಕಾನಿಕ್ ಮಾದರಿಯೊಂದಿಗೆ ತನ್ನ ವಿನ್ಯಾಸವನ್ನು ಹಂಚಿಕೊಳ್ಳಲಿದೆ.

06. ಮಾರುತಿ ಎಸ್ ಎಕ್ಸ್4 ಕ್ರಾಸೋವರ್
ಮಾರುತಿ ಎಸ್‌ಎಕ್ಸ್4 ಎಸ್ ಕ್ರಾಸ್ ಸಂಸ್ಥೆಯಿಂದ ಆಗಮನವಾಗಲಿರುವ ಮೊದಲ ಕ್ರಾಸೋವರ್ ಆಗಿರಲಿದೆ. ಇದು ಹ್ಯುಂಡೈ ಐ20 ಕ್ರಾಸ್, ಫೋಕ್ಸ್‌ವ್ಯಾಗನ್ ಪೊಲೊ, ಟೊಯೊಟಾ ಎಟಿಯೋಸ್ ಕ್ರಾಸ್ ಮತ್ತು ಫಿಯೆಟ್ ಅವೆಂಚ್ಯುರಾ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

05. ಟಾಟಾ ಸಫಾರಿ ಸ್ಟ್ರೋಮ್ ಫೇಸ್‌ಲಿಫ್ಟ್
ದೈತ್ಯಾಕಾರವನ್ನು ಪಡೆದಿರುವ ಹೊರತಾಗಿಯೂ ಟಾಟಾ ಸಫಾರಿ ಸ್ಟ್ರೋಮ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿರಲಿಲ್ಲ. ಇದನ್ನು ಸ್ಪಷ್ಟವಾಗಿ ಮನಗಂಡಿರುವ ಸಂಸ್ಥೆಯು ಲ್ಯಾಂಡ್ ರೋವರ್ ವಿನ್ಯಾಸದಿಂದ ಸ್ಪೂರ್ತಿ ಪಡೆದ ಈ ಕಾರಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲು ಹೊರಟಿದೆ. ಹೆಡ್‌ಲೈಟ್ ಸೇರಿದಂತೆ ಕಾರಿನ ಹೊರಮೈಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಹಾಗೆಯೇ ಮೂರನೇ ಸಾಲಿನಲ್ಲಿ ಫ್ರಂಟ್ ಫೇಸಿಂಗ್ ಸಿಟ್ಟಿಂಗ್ ವ್ಯವಸ್ಥೆ ಕಂಡುಬರಲಿದೆ. ಇನ್ನು ಈ ಬಾರಿ ಸಂಸ್ಥೆಯು ಹೆಚ್ಚು ಶಕ್ತಿಶಾಲಿ 2.2 ಲೀಟರ್ ವ್ಯಾರಿಕೋರ್ ಟರ್ಬೊ ಡೀಸೆಲ್ ಎಂಜಿನ್ ಪರಿಚಿಯಿಸುವ ಇರಾದೆಯನ್ನು ಹೊಂದಿದ್ದು, ಇದು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

04. ಟಾಟಾ ನ್ಯಾನೋ ಆಟೋಮ್ಯಾಟಿಕ್
ಸಣ್ಣ ಕಾರು ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಹೊಂಚು ಹಾಕಿರುವ ದೇಶದ ಅತಿ ದೊಡ್ಡ ಟಾಟಾ ಸಂಸ್ಥೆಯು ಅತಿ ಶೀಘ್ರದಲ್ಲೇ ನ್ಯಾನೋ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

03. ಫೋರ್ಡ್ ಫಿಗೊ ಫೇಸ್ ಲಿಫ್ಟ್
ಮೂರು ಲಕ್ಷ ಮಾರಾಟ ಸಂಖ್ಯೆಯನ್ನು ದಾಟಿರುವ ತನ್ನ ಜನಪ್ರಿಯ ಫಿಗೊ ಕಾರಿನ ಫೇಸ್ ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಫೋರ್ಡ್ ಹೊಂದಿದೆ. ಇದು ಇಕೊಸ್ಪೋರ್ಟ್ ಕಾರಿನಲ್ಲಿರುವುದಕ್ಕೆ ಸಮಾನವಾಗ ಫ್ರಂಟ್ ಗ್ರಿಲ್ ಹಾಗೂ ವೈಶಿಷ್ಟ್ಯಗಳನ್ನು ಪಡೆಯಲಿದೆ.

02. ಫೋರ್ಡ್ ಫಿಗೊ ಆಸ್ಪೈರ್
ಈಗಾಗಲೇ ತನ್ನ ಗುಜರಾತ್ ನ ಹೊಸ ಘಟಕದಲ್ಲಿ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರಿನ ನಿರ್ಮಾಣ ಮಾದರಿಯನ್ನು ಪ್ರದರ್ಶನಗೊಳಿಸಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ನಿಕಟ ಭವಿಷ್ಯದಲ್ಲೇ ಈ ಬಹುನಿರೀಕ್ಷಿತ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

1. ಡಿಸಿ ಅವಂತಿ
ಪ್ರಸ್ತುತ ಪಟ್ಟಿಯಲ್ಲಿ ದೇಶದ ಚೊಚ್ಚಲ ಕ್ರೀಡಾ ಕಾರು ಸೇರಿಕೊಂಡಿದೆ. ಇದು ಡಿಸಿ ಡಿಸೈನ್ ರುವಾರಿ ದಿಲೀಪ್ ಛಾಬ್ರಿಯಾ ಅವರ ಕನಸಿನ ಕೂಸಾಗಿದೆ. ಅಂದಾಜು 35 ಲಕ್ಷ ರು.ಗಳ ಅಸುಪಾಸಿನಲ್ಲಿ ದೇಶದ ಚೊಚ್ಚಲ ಕ್ರೀಡಾ ಕಾರು ಮಾರುಕಟ್ಟೆಗೆ ಪ್ರವೇಶವಾಗಲಿದೆ.

ಇನ್ನು ಈ ಪಟ್ಟಿಯಲ್ಲಿ ಟಾಟಾ ಕೈಟ್ ಸೆಡಾನ್ ಹಾಗೂ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ನೆಕ್ಸಾನ್ ಮಾದರಿಯನ್ನು ನೆನಪಿಸಿಕೊಳ್ಳಲು ಬಯಸುತ್ತಿದ್ದೇವೆ. ನೆಕ್ಸಾನ್ ಒಂದು ಕಾಂಪಾಕ್ಟ್ ಎಸ್‌ಯುವಿ ಆಗಿದ್ದು, 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪ್ರಸ್ತುತ ಪಟ್ಟಿಯಲ್ಲಿ ಯಾವುದೇ ಮಾದರಿ ಬಿಟ್ಟು ಹೋಗಿದ್ದಲ್ಲಿ ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಉಲ್ಲೇಖಿಸಲು ಮರೆಯದಿರಿ...


Click it and Unblock the Notifications








