ಜಗತ್ತಿನ ಅತಿ ವೇಗದ ಎಸ್‌ಯುವಿ 'ಬೆಂಟ್ಲಿ ಬೆನ್‌ಟೈಗಾ'
ಜಗತ್ತಿನ ಅತಿ ವೇಗದ ಕ್ರೀಡಾ ಬಳಕೆಯ ವಾಹನ ಬೆಂಟ್ಲಿ ಬೆನ್ ಟೈಗಾ (Bentley Bentayga) ವಿವರಗಳು ಬಹಿರಂಗವಾಗಿದೆ. 600ರಷ್ಟು ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಅತ್ಯಂತ ಶಕ್ತಿಶಾಲಿ ಬೆನ್ ಟೈಗಾ ಎಸ್‌ಯುವಿ ಕೇವಲ ನಾಲ್ಕು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.
ಈ ಮೂಲಕ ಜಗತ್ತಿ ಅತಿ ವೇಗದ ಎಸ್ ಯುವಿ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಅಲ್ಲದೆ ಗಂಟೆಗೆ ಗರಿಷ್ಠ 301 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಶಕ್ತವಾಗಿದೆ. ಕೇವಲ ವೇಗದ ವಿಚಾರದಲ್ಲಿ ಮಾತ್ರವಲ್ಲದೆ ಅತ್ಯಾಧುನಿಕ ಐಷಾರಾಮಿ ಸೌಲಭ್ಯಗಳು ಇದರಲ್ಲಿ ಲಭ್ಯವಾಗಲಿದೆ.

ಮುಂಬರುವ ದಿನಗಳಲ್ಲಿ ನಾಲ್ಕು, ಐದು ಹಾಗೂ ಏಳು ಸೀಟುಗಳ ಡೀಸೆಲ್ ಪ್ಲಗ್ ಇನ್ ಹೈಬ್ರಿಡ್ ಆಯ್ಕೆಗಳಲ್ಲಿ ಬೆಂಟ್ಲಿ ಬನ್ ಟೈಗಾ ಲಭ್ಯವಾಗಲಿದೆ. ಅಂದರೆ ಈ ವಿಭಾಗದಲ್ಲಿರುವ ಐಷಾರಾಮಿ ಎಸ್‌ಯುವಿ ಗಳಿಗೆ ಕಠಿಣ ಸ್ಪರ್ಧೆಯನ್ನು ಒಡ್ಡಲಿದೆ.

ನಾಲ್ಕು ವರ್ಷಗಳಷ್ಟು ಹಿಂದಿನಿಂದಲೇ ಬೆನ್ ಟೈಗಾ ಆಗಮನದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಇವೆಲ್ಲವನ್ನು ಮನಗಂಡಿರುವ ಬೆಂಟ್ಲಿ ಒಂದು ಶಕ್ತಿಶಾಲಿ, ಐಷಾರಾಮಿ ಹಾಗೂ ಹೆಚ್ಚು ತಾಜಾತನದ ಪರಿಪೂರ್ಣ ಎಸ್‌ಯುವಿ ತಯಾರಿಸಿದೆ.

ನೂತನ ಬೆಂಟ್ಲಿ ಬೆನ್ ಟೈಗಾ ಕ್ರೀಡಾ ಬಳಕೆಯ ವಾಹನವು 6.0 ಲೀಟರ್ ಡಬ್ಲ್ಯು 12 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 600 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಫೋರ್ ವೀಲ್ ಡ್ರೈವ್, ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಮೊನಚಾದ ವಿನ್ಯಾಸ, ಎಲ್‌ಇಡಿ ಹೆಡ್ ಲ್ಯಾಂಪ್, ದೊಡ್ದದಾದ ಡೈಮಂಡ್ ಮ್ಯಾಟ್ರಿಕ್ಸ್ ಗ್ರಿಲ್, ಪ್ಯಾನರೋಮಿಕ್ ವಿಂಡೋ, ಎಂಟು ಚಾಲನಾ ವಿಧಗಳು ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡಲಿದೆ.

ಹಿಂದಿನ ಬೆಂಟ್ಲಿ ಮಾದರಿಗಳಿಗೆ ಹೋಲಿಸಿದಾಗ ಹೊಸತಾದ ಬೆನ್ ಟೈಗಾ ಶೇಕಡಾ 12ರಷ್ಟು ಕಡಿಮೆ ಇಂಧನ ಬಳಕೆಯಾಗಲಿದೆ. ಮುಂದಿನ ದಿನಗಳಲ್ಲಿ ಡೀಸೆಲ್ ಹೈಬ್ರಿಡ್ ಮಾದರಿಯೂ ಬಿಡುಗಡೆಯಾಗಲಿದೆ.

ಇನ್ನು ಕಾರಿನೊಳಗೆ ಎಂಟು ಇಂಚುಗಳ ಕ್ರೈಸ್ಟಲ್ ಕ್ಲಿಯರ್ ಟಚ್ ಸ್ಕ್ರೀನ್, 15 ಬಣ್ಣಗಳ ಲೆಥರ್ ಸೀಟು ಆಯ್ಕೆಗಳು, 4ಜಿ ವೈಫೈ, ನೈಮ್ ಸೌರಂಡ್ ಸೌಂಡ್ ಸಿಸ್ಟಂಗಳು ಗರಿಷ್ಠ ಮನರಂಜನೆಯನ್ನು ನಿಮ್ಮದಾಗಿಸಲಿದೆ.

ಇವೆಲ್ಲದಕ್ಕೂ ಮಿಗಿಲಾಗಿ ಮುಂಬರುವ 2015 ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲೂ ಬೆಂಟ್ಲಿ ಬೆನ್ ಟೈಗಾ ಭರ್ಜರಿ ಪ್ರದರ್ಶನವನ್ನು ಕಾಣಲಿದೆ.


Click it and Unblock the Notifications








