ಸದ್ಯದಲ್ಲೇ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ
ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ತನ್ನ ಐಕಾನಿಕ್ ಮಾದರಿಗಳಲ್ಲಿ ಒಂದಾಗಿರುವ ಐ8 ಸ್ಪೋರ್ಟ್ಸ್ ಕಾರನ್ನು ಮುಂಬರುವ 2015 ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡಲಿದೆ.
2014ನೇ ಸಾಲಿನಲ್ಲಿ ಅನೇಕ ತಾಜಾ ಹಾಗೂ ಪರಿಷ್ಕೃತ ಮಾದರಿಗಳನ್ನು ಪರಿಚಯಿಸಿರುವ ಬಿಎಂಡಬ್ಲ್ಯು ಈ ಸಾಲಿನಲ್ಲೂ ಇದನ್ನೇ ಮುಂದುವರಿಸುವ ಇರಾದೆ ಹೊಂದಿದೆ. ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಐ8, ಪರಿಸರ ಸ್ನೇಹಿ ಹೈಬ್ರಿಡ್ ಸ್ಪೋರ್ಟ್ಸ್ ಕಾರಾಗಿದೆ. ಅಲ್ಲದೆ 2014 ವರ್ಷಾಂತ್ಯದಲ್ಲೇ ಬಿಡುಗಡೆ ಕಾಣಬೇಕಾಗಿತ್ತು.

ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಮೋಟಾರುಗಳನ್ನು ಹೊಂದಿರುವ ಐ8, ವಿಶ್ವದ ಆಕರ್ಷಕ ಕ್ರೀಡಾ ಕಾರುಗಳಲ್ಲಿ ಒಂದಾಗಿದೆ. ಅಲ್ಲದೆ ಭಾರ ಕಡಿತಗೊಳಿಸುವ ನಿಟ್ಟಿನಲ್ಲಿ ಕಾರ್ಬನ್ ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದೆ.
ಇದು 1.5 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 227.74 ಅಶ್ವಶಕ್ತಿ (320 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರು ಹೆಚ್ಚುವರಿ 129.15 ಅಶ್ವಶಕ್ತಿ (250 ತಿರುಗುಬಲ) ಉತ್ಪಾದಿಸಲು ನೆರವಾಗುತ್ತದೆ.

ಬಿಎಂಡಬ್ಲ್ಯು ಪ್ರಕಾರ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಕೇವಲ 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. (ವಿದ್ಯುನ್ಮಾನವಾಗಿ ನಿರ್ಬಂಧಿತ) ವೇಗದಲ್ಲಿ ಸಂಚರಿಸಲಿದೆ. ಇನ್ನು ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ ಗಂಟೆಗೆ ಗರಿಷ್ಠ 120 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.
ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಭಾರತ ಪ್ರವೇಶ ಪಡೆಯಲಿದ್ದು, ಎರಡು ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








