ಮಾ.17ರಂದು ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಬಿಡುಗಡೆ
ದಕ್ಷಿಣ ಕೊರಿಯಾ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಮುಂಬರುವ 2015 ಮಾರ್ಚ್ 17ರಂದು ಬಹುನಿರೀಕ್ಷಿತ ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಕಾರನ್ನು ಲೋಕಾರ್ಪಣೆ ಮಾಡಲಿದೆ.
ವಿಶೇಷವೆಂದರೆ ಹ್ಯುಂಡೈ ಐ20 ಆಕ್ಟಿವ್ ಕಾರಿನ ಜಾಗತಿಕ ಬಿಡುಗಡೆ ಭಾರತದಲ್ಲೇ ನಡೆಯುತ್ತಿದೆ. ಇದಾದ ಬಳಿಕ ದೇಶದ ಪ್ರಮುಖ ನಗರಗಳಲ್ಲಿ ಸ್ಥಳೀಯ ಲಾಂಚ್ ಕಂಡುಬರಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಹ್ಯಾಚ್‌ಬ್ಯಾಕ್ ಕಾರಿನ ತಳಹದಿಯಲ್ಲಿ ನಿರ್ಮಾಣವಾಗಿರುವ ಐ20 ಆಕ್ಟಿವ್ ಕ್ರಾಸೋವರ್ ಎಂಬ ಹೊಸ ವಿಭಾಗದಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸುವ ನಂಬಿಕೆಯಿದೆ.
ಕ್ರಾಸೋವರ್ ವಿಭಾಗದ ಬಗ್ಗೆ ಮಾತನಾಡುವುದಾದ್ದಲ್ಲಿ ಭಾರತೀಯ ಗ್ರಾಹಕರಿದು ಹೊಸ ಅನುಭವವಾಗಲಿದೆ. ಈ ವಿಭಾಗದಲ್ಲಿ ಈ ವರೆಗೆ ಬೆರಳೆಣಿಕೆಯಷ್ಟು ಕಾರುಗಳು ಮಾತ್ರ ಲಭ್ಯವಿದೆ. ಅವುಗಳಲ್ಲಿ ಫಿಯೆಟ್ ಅವೆಂಚ್ಯುರಾ, ಟೊಯೊಟಾ ಎಟಿಯೋಸ್ ಕ್ರಾಸ್ ಹಾಗೂ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಪ್ರಮುಖವಾಗಿದೆ.

ತನ್ನ ಶೈಲಿ ಹಾಗೂ ನೋಟದಲ್ಲಿ ಈ ಎಲ್ಲ ಸವಾಲುಗಳನ್ನು ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಕಾರು ಹೇಗೆ ಮೆಟ್ಟಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಹಾಗಿದ್ದರೂ ಐ20 ಆಕ್ಟಿವ್ ಕಾರಲ್ಲಿ ಹೊಸ ಎಂಜಿನ್ ಬಳಕೆಯಾಗುವುದಿಲ್ಲ. ಇದು ಹ್ಯಾಚ್‌ಬ್ಯಾಕ್ ಕಾರಿನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಹಂಚಿಕೊಳ್ಳಲಿದೆ. ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳು ಇರಲಿದ್ದು, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ನಿರೀಕ್ಷೆ ಮಾಡಬಹುದಾಗಿದೆ.
ಅಂದ ಹಾಗೆ ಯುರೋಪ್‌ನ ಜರ್ಮನಿಯಲ್ಲಿರುವ ತನ್ನ ರಸ್ಸೆಲ್‌ಶೀಮ್ ಹ್ಯುಂಡೈ ಮೋಟಾರು ಡಿಸೈನ್ ಸೆಂಟರ್‌ನಲ್ಲಿ ಐ20 ಆಕ್ಟಿವ್ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಈ ಸಂಬಂಧ ಎಂಜಿನಿಯರ್‌ಗಳು ಕಠಿಣ ಪ್ರಯತ್ನ ಮಾಡಿದ್ದು, ಬದಿಯಲ್ಲಿ ಪ್ಲಾಸ್ಟಿಕ್ ಸೈಡ್ ಕ್ಲಾಡಿಂಗ್, ಸ್ಕಿಡ್ ಪ್ಲೇಟ್, ರೂಫ್ ರೈಲ್, ಹೊಸ ಬಂಪರ್ ಹಾಗೂ ಅಲಾಯ್ ವೀಲ್‌ಗಳನ್ನು ಕಾಣಬಹುದಾಗಿದೆ. ಇನ್ನು ಒಳಮೈ ಗರಿಷ್ಠ ಸೌಲಭ್ಯಗಳನ್ನು ನಿರೀಕ್ಷೆ ಮಾಡಬಹುದಾಗಿದೆ.
ಅಷ್ಟಕ್ಕೂ ಭಾರತ ಮಾರುಕಟ್ಟೆಯಲ್ಲಿ ಐ20 ಆಕ್ಟಿವ್ ಕಾರಿನ ಬೆಲೆ ನಿರ್ಣಾಯಕ ಘಟಕವೆನಿಸಲಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಇದರ ಎಕ್ಸ್ ಶೋ ರೂಂ ಬೆಲೆ ಏಳು ಲಕ್ಷ ರು.ಗಳಿಂದ 12.50 ಲಕ್ಷ ರು.ಗಳ ವರೆಗಿರುವ ಸಾಧ್ಯತೆಯಿದೆ.


Click it and Unblock the Notifications








