ಶೋ ರೂಂ ಒಳನುಗ್ಗಿದ ವ್ಯಾಗನಾರ್ ಎಎಂಟಿ; ದೀಪಾವಳಿಗೆ ಸಿಡಿಮದ್ದು ಗ್ಯಾರಂಟಿ
ಈ ಹಿಂದೆಯೇ ವರದಿ ಮಾಡಿರುವಂತೆಯೇ ಅತಿ ನೂತನ ವ್ಯಾಗನಾರ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಮಾದರಿಯು ಮಾರುತಿ ಸುಜುಕಿ ಸಂಸ್ಥೆಯ ಶೋ ರೂಂ ಪ್ರವೇಶವಾಗಿದ್ದು, ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭರ್ಜರಿ ಬಿಡುಗಡೆಯಾಗಲಿದೆ.
Also Read: ಮಾರುತಿಯಿಂದ ಬರುತ್ತಿದೆ 7 ಸೀಟಿನ ವ್ಯಾಗನಾರ್ ಎಂಪಿವಿ
'ಟಾಲ್ ಬಾಯ್' ಎಂಬ ಅಕ್ಕರೆಯ ಹೆಸರಿನೊಂದಿಗೆ ಕಳೆದ ಕೆಲವು ವರ್ಷಗಳಿಂದ ಜನ ಮನ್ನಣೆ ಗೆದ್ದಿರುವ ವ್ಯಾಗನಾರ್ ಈಗ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಗ್ರಾಹಕರಿಗೆ ಮತ್ತಷ್ಟು ಹತ್ತಿರುವಾಗುವ ನಿರೀಕ್ಷೆಯಲ್ಲಿದೆ.

ಬಲ್ಲ ಮೂಲಗಳ ಪ್ರಕಾರ ಮಾರುತಿ ಶೋ ರೂಂವೊಂದರಲ್ಲಿ ವ್ಯಾಗನಾರ್ ವಿಎಕ್ಸ್‌ಐ ಎಎಂಟಿ ಮಾದರಿಯು ಪ್ರತ್ಯಕ್ಷಗೊಂಡಿದೆ. ಪ್ರಾರಂಭದಲ್ಲಿ ಈ ವೆರಿಯಂಟ್ ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ. ಹಾಗಿದ್ದರೂ ಮಾರುತಿ ವ್ಯಾಗನಾರ್ ಎಲ್‌ಎಕ್ಸ್‌ಐ ಮಾದರಿಯಲ್ಲೂ ಎಎಂಟಿ ಲಭ್ಯವಾಗುವ ಸಾಧ್ಯತೆಯಿದೆ.

ವ್ಯಾಗನಾರ್ ಮಗದೊಂದು ರೂಪವಾಗಿರುವ ಸ್ಟ್ರೀಂಗ್ರೇ ಮಾದರಿಗೂ ಎಎಂಟಿ ಕೋಡು ಲಭ್ಯವಾಗಲಿದೆ ಎಂಬುದು ತಿಳಿದು ಬಂದಿದೆ. ನಿಮ್ಮ ಮಾಹಿತಿಗಾಗಿ ಮಾರುತಿ ಸೆಲೆರಿಯೊದಲ್ಲಿ ನೀಡಲಾಗಿರುವ ಎಎಂಟಿ ಆಯ್ಕೆಯೂ ಭಾರಿ ಯಶ ಸಾಧಿಸಿತ್ತು.

ಅಂದ ಹಾಗೆ ಮಾರುತಿ ವ್ಯಾನನಾರ್ ಆರ್, 998 ಸಿಸಿ, 3 ಸಿಲಿಂಡರ್, ಕೆ10ಬಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 90 ಎನ್‌ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಸೆಲೆರಿಯೊ ಜೊತೆಗೆ ಆಲ್ಟೊ ಕೆ10 ಹ್ಯಾಚ್ ಬ್ಯಾಕ್ ಕಾರಿನಲ್ಲಿರುವುದಕ್ಕೆ ಸಮಾನವಾದ 5 ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ವ್ಯಾಗನಾರ್ ಕಾರಿಗೂ ಜೋಡಣೆಯಾಗಲಿದೆ. ಇದನ್ನು ಇಟಲಿಯ ಐಕಾನಿಕ್ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಪೂರೈಸಲಿದೆ.

ದೇಶದ ಜನಪ್ರಿಯ ಹಾಗೂ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ವ್ಯಾಗನಾರ್ ಒಂದಾಗಿದೆ. ಈಗ ಎಎಂಟಿ ಆಯ್ಕೆಯ ಲಭ್ಯತೆಯೊಂದಿಗೆ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡುವ ಇರಾದೆಯಲ್ಲಿದೆ.

ಪ್ರಸ್ತುತ ಮಾರುತಿ ಸುಜುಕಿ ವ್ಯಾಗನಾರ್ ಎಲ್‌ಎಕ್ಸ್‌ಐ ಮತ್ತು ವಿಎಕ್ಸ್‌ಐ ಮಾದರಿಗಳು ಅನುಕ್ರಮವಾಗಿ 4.03 ಲಕ್ಷ ರು. ಹಾಗೂ 4.28 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಇವೆರಡು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಆಧಾರದಲ್ಲಿ ಕೊಡಲಾಗಿದೆ. ಅಂದರೆ ಎಎಂಟಿ ಮಾದರಿಯು ಮತ್ತಷ್ಟು 20,000 ರು.ಗಳಿಂದ 30,000 ರು.ಗಳಷ್ಟು ದುಬಾರಿಯೆನಿಸಲಿದೆ.

ಇದೀಗಷ್ಟೇ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದ್ದ ಮಾರುತಿ ಭಾರಿ ಬುಕ್ಕಿಂಗ್ಸನ್ನು ಗಿಟ್ಟಿಸಿಕೊಂಡಿತ್ತು. ಇದು ಸಂಸ್ಥೆಯ ಪ್ರೀಮಿಯಂ ನೆಕ್ಸಾ ಶೋ ರೂಂಗಳ ಮುಖಾಂತರ ಮಾತ್ರ ಮಾರಾಟವಾಗುತ್ತಿದೆ. ಆದರೆ ವ್ಯಾಗನಾರ್ ಎಎಂಟಿ ಮಾರುತಿಯ ಎಲ್ಲ ಶೋ ರೂಂಗಳಲ್ಲೂ ಮಾರಾಟಕ್ಕೆ ಲಭ್ಯವಾಗಲಿದೆ.

ಒಟ್ಟಿನಲ್ಲಿ ಈ ದೀಪಾವಳಿ ವ್ಯಾಗನಾರ್ ಎಎಂಟಿ ಕೊಡುಗೆಯೊಂದಿಗೆ ದೇಶದ ವಿಸ್ತಾರವಾಗಿ ಹರಡಿರುವ ಪ್ರಯಾಣಿಕ ಮಾರುಕಟ್ಟೆಯಲ್ಲಿ ಮಗದೊಂದು ಸಿಡಿಮದ್ದು ಪ್ರದರ್ಶನದ ಹುಮ್ಮಸ್ಸಿನಲ್ಲಿದೆ.

ಶ್ರೀಮಂತರ ರೇಸಿನಲ್ಲಿ ಗೆದ್ದ ಬಡವರ ಕಾರು


Click it and Unblock the Notifications








