ಭಲೇ ಭೇಷ್ ಮಾರುತಿ 'ಬಲೆನೊ' ಜಾಗತಿಕ ಅನಾವರಣ
"ಭಲೇ ಭಲೇ ಚಂದದ ಚೆಂದುಳ್ಳಿ ಹೆಣ್ಣು ನೀನು. ಮಿಂಚುಕುಡ ನಾಚುವ ಮಿಂಚಿನ ಬಳ್ಳಿ ನೀನು. ನಿನ್ನ ಚಂದ ಹೊಗಳಲು ಪದ ಪುಂಜಸಾಲದು". ನಿಜ ಹೊಚ್ಚ ಹೊಸ ಮಾರುತಿ ಬಲೆನೊ ಕಾರಿಗೆ ಈ ಜನಪ್ರಿಯ ಹಾಡಿನ ಸಾಲುಗಳು ಹೊಚ್ಚು ಸೂಕ್ತವೆನಿಸುತ್ತದೆ.
ಇದನ್ನಿಲ್ಲಿ ಉಲ್ಲೇಖಿಸಲು ಕಾರಣವೊಂದಿದೆ. ಜರ್ಮನಿಯಲ್ಲಿ ಸಾಗುತ್ತಿರುವ ಜಗತ್ತಿನ ಅತಿ ದೊಡ್ಡ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಅತಿ ನೂತನ ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಭರ್ಜರಿ ಪ್ರದರ್ಶನ ಕಂಡಿದೆ.

ಅತಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಬಲೆನೊ ಒಂದು ಜಾಗತಿಕ ಉತ್ಪನ್ನವಾಗಿದ್ದು, ದೇಶದಲ್ಲೇ ನಿರ್ಮಾಣವಾಗಲಿದೆ. ಅಲ್ಲದೆ ಈಗಷ್ಟೇ ತೆರೆದುಕೊಂಡಿರುವ ಮಾರುತಿಯ ಎಕ್ಸ್ ಕ್ಲೂಸಿವ್ 'ನೆಕ್ಸಾ' ಪ್ರೀಮಿಯಂ ಶೋ ರೂಂಗಳ ಮುಖಾಂತರ ಮಾರಾಟವಾಗಲಿದೆ.

ಮಾರುತಿಯ ಮುಂದಿನ ತಲೆಮಾರಿನ ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (ಎಸ್‌ಎಚ್‌ವಿಎಸ್) ತಳಹದಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ನಿಮ್ಮ ಮಾಹಿತಿಗಾಗಿ ಈಗಷ್ಟೇ ಬಿಡುಗಡೆಯಾಗಿರುವ ಸಿಯಾಝ್ ಡೀಸೆಲ್ ಹೈಬ್ರಿಡ್ ಕಾರಿನಲ್ಲೂ ಇದೇ ತಂತ್ರಜ್ಞಾನ ಆಳವಡಿಕೆಯಾಗಿದೆ.

ಆರಂಭದಲ್ಲಿ ವೈಆರ್‌ಎ ಕೋಡ್ ಪಡೆದುಕೊಂಡಿದ್ದ ಮಾರುತಿ ಬಲೆನೊ ಈ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು, ಜನಪ್ರಿಯ ಸ್ವಿಫ್ಟ್ ಗಿಂತಲೂ ಮೇಲ್ಧರ್ಜೆಯಲ್ಲಿ ಗುರುತಿಸಿಕೊಳ್ಳಲಿದ್ದು, ಗರಿಷ್ಠ ವೈಶಿಷ್ಟ್ಯಗಳನ್ನು ಪಡೆಯಲಿದೆ.

ದೇಶದಲ್ಲಿ ಹ್ಯುಂಡೈ ಎಲೈಟ್ ಐ20, ಹೋಂಡಾ ಜಾಝ್ ಹಾಗೂ ಫೋಕ್ಸ್ ವ್ಯಾಗನ್ ಪೊಲೊದಂತಹ ಮಾದರಿಗಳಿಗೆ ಪೈಪೋಟಿ ಒಡ್ಡಲಿರುವ ಮಾರುತಿ ಬಲೆನೊ, 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

ಹೊರಮೈ
ಹೊರಗಿನಿಂದ ವೀಕ್ಷಿಸುವಾಗ 'ವಿ' ಆಕಾರದ ಫ್ರಂಟ್ ಗ್ರಿಲ್, ಹೆಡ್ ಲ್ಯಾಂಪ್ ಕ್ಲಸ್ಟರ್, 'ಎಲ್' ಆಕೃತಿಯ ಎಲ್‌ಇಡಿ, ಬಾಗಿದ ರೂಫ್ ಲೈನ್, ಕಪ್ಪು ವರ್ಣದ ಪಿಲ್ಲರ್ ಗಳು, ಕ್ರೋಮ್ ಸ್ಪರ್ಶತೆ, 16 ಇಂಚುಗಳ ಎಂಟು ಸ್ಪೋಕ್ ಅಲಾಯ್ ವೀಲ್ ಮತ್ತು ಎಲ್ ಇಡಿ ಟೈಲ್ ಲ್ಯಾಂಪ್ ಗಳು ಪ್ರಮುಖ ಆಕರ್ಷಣೆಗಳಾಗಿವೆ.

ಒಳಮೈ
ಹೊಸ ಬಲೆನೊ ಕಾರಿನ ಒಳಮೈ ಸಹ ಬ್ಲ್ಯಾಕ್ ಥೀಮ್ ಪಡೆದುಕೊಳ್ಳಲಿದ್ದು, ಸಿಲ್ವರ್ ಸ್ಪರ್ಶತೆಯೂ ಕಂಡುಬರಲಿದೆ. ಹಾಗೆಯೇ ಏಳು ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆ, ಆಪಲ್ ಕಾರ್ ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಲೆಥರು ಸೀಟು, ಅಡಾಪ್ಟಿಪ್ ಕ್ರೂಸ್ ಕಂಟ್ರೋಲ್, ಡ್ಯುಯಲ್ ಏರ್ ಬ್ಯಾಗ್ ಮುಂತಾದ ಸೌಲಭ್ಯಗಳು ವಿಶಿಷ್ಟವಾಗಿಸಲಿದೆ.

ಆಯಾಮ
3995 ಎಂಎಂ ಉದ್ದ,
1745 ಎಂಎಂ ಅಗಲ
1470 ಎಂಎಂ ಎತ್ತರ
ಢಿಕ್ಕಿ ಜಾಗ 355 ಲೀಟರ್


Click it and Unblock the Notifications