ನಾಸಾದಿಂದ ಚಾಲಕರಹಿತ ಕಾರು ಅಭಿವೃದ್ಧಿ
ನೀವು ಕಾರು ಚಾಲನೆಯನ್ನು ಇನ್ನೂ ಕರಗತ ಮಾಡಿಕೊಂಡಿಲ್ಲವೇ? ಪರವಾಗಿಲ್ಲ ಬಿಡಿ ಇನ್ನು ಕೆಲವೇ ವರ್ಷಗಳಷ್ಟೇ ಕಾಯಿರಿ. ಆಧುನಿಕ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಬೆಳೆದಿದೆಎಂದರೆ ಭವಿಷ್ಯದಲ್ಲೊಂದು ಒಂದು ದಿನ ನೀವು ಡ್ರೈವಿಂಗ್ ಕಳಿತುಕೊಳ್ಳುವ ಅಗತ್ಯವೇ ಇರುವುದಿಲ್ಲ.
ಹೌದು, ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆ ನಿಸ್ಸಾನ್ ಜೊತೆಗೂಡಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (National Aeronautics and Space Administration), ಡ್ರೈವರ್‌ಲೆಸ್ ಅಥವಾ ಚಾಲಕರಹಿತ ಕಾರು ಅಭಿವೃದ್ಧಿಯಲ್ಲಿ ತೊಡಗಿದೆ.

ಇದಕ್ಕೆ ಸಂಬಂಧಿಸಿದ ಮಹತ್ವದ ಘೋಷಣೆಯನ್ನು ಯೋಕಹಮಾ ತಳಹದಿಯ ನಿಸ್ಸಾನ್ ಮೋಟಾರು ಕಂಪನಿ ಹಾಗೂ ಕ್ಯಾಲಿಫೋರ್ನಿಯಾದ ನಾಸಾ ಆಮಸ್ ರಿಸರ್ಚ್ ಸೆಂಟರ್ ಹೊರಡಿಸಿದ್ದು, ಸ್ವಯಂಚಾಲಿತ ವಾಹನಗಳ ವ್ಯವಸ್ಥೆಗಳ ಬಗ್ಗೆ ಐದು ವರ್ಷಗಳ ಕಾಲ ನಿರಂತರ ಅಧ್ಯಯನ ಹಾಗೂ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲಿದೆ.
ಸ್ವಯಂ ಚಾಲಿತ ಕಾರುಗಳ ಬಗ್ಗೆ ಉತ್ಸಾಹಿತವಾಗಿರುವ ನಿಸ್ಸಾನ್, ಇದು ಸುರಕ್ಷತೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ ಎಂದಿದೆ. ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಹಾಗೂ ಇನ್ಪಿನಿಟಿ ಲಗ್ಷುರಿ ಕಾರುಗಳಗಳಲ್ಲಿ 2016ರಿಂದ 2020ರ ಅವಧಿಯಲ್ಲಿ ಸ್ವಯಂಚಾಲಿತ ಡ್ರೈವಿಂಗ್ ತಂತ್ರಜ್ಞಾನ ಆಳವಡಿಸುವುದು ಗುರಿಯಾಗಿದೆ. ಈ ಮೂಲಕ ಸಂಪೂರ್ಣ ಎಮಿಷನ್ ಫ್ರಿ ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ ಕೊಡಲಿದೆ.
ನಾಸಾ ಹಾಗೂ ನಿಸ್ಸಾನ್ ಪಾಲುದಾರಿಕೆಯೊಂದಿಗೆ ಚಾಲಕರಹಿತ ಕಾರುಗಳ ಅವಿಷ್ಕಾರಕ್ಕೆ ಸಂಬಂಧಿಸಿದಂತೆ ಗರಿಷ್ಠ ತಂತ್ರಜ್ಞಾನವನ್ನು ಹೊರತರುವುದು ಗುರಿಯಾಗಿದೆ. ಇದರ ಸುರಕ್ಷತೆಯು ಸೆನ್ಸಾರ್ ತಳಹದಿಯಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಸಾಧ್ಯವಾದಷ್ಟು ಅಪಘಾತಗಳನ್ನು ತಪ್ಪಿಸಲಿದೆ.
ತಂತ್ರಜ್ಞಾನ ದೈತ್ಯ ಗೂಗಲ್, ಜಪಾನ್‌ನದ್ದೇ ಆಗಿರುವ ಟೊಯೊಟಾ ಮೋಟಾರು ಕಂಪನಿ, ಅಮೆರಿಕದ ಜನರಲ್ ಮೋಟಾರ್ಸ್ ಹಾಗೂ ಫೋರ್ಡ್ ಮೋಟಾರು ಸಂಸ್ಥೆಗಳು ಸಹ ತನ್ನದೇ ಆದ ಡ್ರೈವರ್‌ಲೆಸ್ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.


Click it and Unblock the Notifications








