ಅಕಾರ್ಡ್, ಸಿವಿಕ್‌ಗೆ ಮರು ಜೀವ ತುಂಬಲಿರುವ ಹೋಂಡಾ; ಆದರೆ ಏತಕ್ಕೆ ?
ಪ್ರತಿಯೊಂದು ವಿಭಾಗದಲ್ಲೂ ಒಂದೊಂದೇ ನೂತನ ಕಾರುಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ತನ್ನ ಸಾನಿಧ್ಯವನ್ನು ಗಟ್ಟಿಪಡಿಸುತ್ತಿರುವ ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಹೋಂಡಾ, ಈಗ ತನ್ನ ಜನಪ್ರಿಯ ಅಕಾರ್ಡ್ ಮತ್ತು ಸಿವಿಕ್ ಮಾದರಿಗಳಿಗೆ ಮರು ಜೀವ ತುಂಬುವ ಇರಾದೆಯಲ್ಲಿದೆ.
ಇತ್ತೀಚೇಗಷ್ಟೇ ಬಿಆರ್-ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳನ್ನು ಬಿಡುಗಡೆ ಮಾಡಿರುವ ಹೋಂಡಾ ಈಗ ತನ್ನ ಪ್ರೀಮಿಯಂ ಅಕಾರ್ಡ್ ಮತ್ತು ಸಿವಿಕ್ ಮಾದರಿಗಳನ್ನು ಪರಿಚಯಿಸಲಿದೆ. ಇದರ ಹಿಂದೆ ಪ್ರಮುಖ ಕಾರಣವೊಂದಿದೆ. ಅದೇನು ಎಂಬುದನ್ನು ನಿಮ್ಮಿಂದ ಊಹಿಸಬಹುದೇ?

ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹೋಂಡಾ ಅಕಾರ್ಡ್ ಮತ್ತು ಸಿವಿಕ್ ಈಗಲೂ ಅತ್ಯುತ್ತಮ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುತ್ತಿದೆ. ಶೈಲಿಯಿಂದ ಹಿಡಿದು ಇದರ ಮೈಲೇಜ್ ಮತ್ತು ಆರಾಮದಾಯಕ ಅಂಶಗಳು ಗ್ರಾಹಕರನ್ನು ಅತಿ ಹೆಚ್ಚು ಮೆಚ್ಚುವಂತೆ ಮಾಡಿದೆ.

2010ರ ಸಾಲಿನಿಂದಲೇ ಅಕಾರ್ಡ್ ಮತ್ತು ಸಿವಿಕ್ ಮಾದರಿಗಳನ್ನು ಭಾರತೀಯ ರಸ್ತೆಯಿಂದ ಹಿಂಪಡೆದಿರುವ ಹೋಂಡಾ ತದಾ ಬಳಿಕ ಹಿನ್ನಡೆಯನ್ನು ಅನುಭವಿಸಿತ್ತು. ಇದರ ಸ್ಪಷ್ಟ ಲಾಭವನ್ನು ಪಡೆದ ಫೋಕ್ಸ್ ವ್ಯಾಗನ್, ಸ್ಕೋಡಾ ಮತ್ತು ಟೊಯೊಟಾ ಸಂಸ್ಥೆಗಳು ಈ ವಿಭಾಗವನ್ನು ವಶಪಡಿಸಿಕೊಂಡಿತ್ತು.

ಪ್ರಸಕ್ತ ಸಾಲಿನಲ್ಲೇ ಅಕಾರ್ಡ್ ಜೊತೆಗೆ ಹೊಸ ಸಿಆರ್ ವಿ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೋಂಡಾ ಹೊಂದಿದೆ. ಈ ಮೂಲಕ ತನಗೆ ನಷ್ಟವಾದ ಪ್ರೀಮಿಯಂ ಪಟ್ಟವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದೆ.

ಅಕಾರ್ಡ್ ಮತ್ತು ಸಿವಿಕ್ ಆಗಮನದೊಂದಿಗೆ ತನ್ನ ಬ್ರಾಂಡ್ ಮೌಲ್ಯವನ್ನು ವೃದ್ಧಿಸುವ ಇರಾದೆಯನ್ನು ಹೋಂಡಾ ಹೊಂದಿದೆ. ಹಾಗಿದ್ದರೂ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿರುವ ಈ ವೇಳೆಯಲ್ಲಿ ಹೋಂಡಾ ಯೋಜನೆ ಯಶಸ್ವಿಯಾದಿತೇ ಎಂಬುದನ್ನು ಕಾದು ನೋಡಬೇಕಾಗಿದೆ.

ನೂತನ ಅಕಾರ್ಡ್ ಮತ್ತು ಸಿವಿಕ್ ಮಾದರಿಗಳಲ್ಲಿ ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಇವೆಲ್ಲದರ ಜೊತೆಗೆ ಗರಿಷ್ಠ ಸೌಲಭ್ಯ ಮತ್ತು ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗುವುದು.

ಒಟ್ಟಿನಲ್ಲಿ ಹೋಂಡಾ ತನ್ನ ಶ್ರೇಣಿಯ ಕಾರುಗಳ ಸಂಖ್ಯೆಯನ್ನು ವೃದ್ಧಿಸುವ ಇರಾದೆಯಲ್ಲಿದ್ದು, ಬೆಳೆದು ಬರುತ್ತಿರುವ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.


Click it and Unblock the Notifications