ಹ್ಯುಂಡೈ ಎಲಂಟ್ರಾ ಸ್ಪೋರ್ಟ್ ಭಾರತಕ್ಕೂ ಬರುತ್ತಾ?
ದಕ್ಷಿಣ ಕೊರಿಯಾ ಮೂಲದ ವಾಹನ ಸಂಸ್ಥೆಯಾಗಿರುವ ಹ್ಯುಂಡೈ ತವರೂರಿನ ಮಾರುಕಟ್ಟೆಯಲ್ಲಿ ಎಲಂಟ್ರಾ ಸೆಡಾನ್ ಕಾರಿನ ಕ್ರೀಡಾತ್ಮಕ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಅವಂಟೆ ಎಂದೆನಿಸಿಕೊಂಡಿರುವ ಎಲಂಟ್ರಾದ ಕ್ರೀಡಾ ಆವೃತ್ತಿಯು ಅವಂಟೆ ಸ್ಪೋರ್ಟ್ ಎಂದು ಹೆಸರಿಸಿಕೊಳ್ಳಲಿದೆ.

ನೂತನ ಅವಂಟೆ ಸ್ಪೋರ್ಟ್ 1.6 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 265 ಎನ್ ಎಂ ತಿರುಗುಬಲದಲ್ಲಿ 204 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಪ್ರಸ್ತುತ ಕಾರಿನಲ್ಲಿ ಎರಡು ಗೇರ್ ಬಾಕ್ಸ್ ಗಳ ಆಯ್ಕೆಯಿರುತ್ತದೆ. ಅವುಗಳೆಂದರೆ 6 ಸ್ಪೀಡ್ ಮ್ಯಾನುವಲ್ ಮತ್ತು ಐಚ್ಛಿಕ ಏಳು ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್.

ಕ್ರೀಡಾ ಶೈಲಿಗೆ ತಕ್ಕಂತೆ ಅತ್ಯುತ್ತಮ ಆವೇಗವನ್ನು ಕಾಪಾಡಿಕೊಳ್ಳಲಿರುವ ಅವಂಟೆ ಸ್ಪೋರ್ಟ್, ಕೇವಲ ಎಂಟು ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ.

ಹ್ಯುಂಡೈ ಅವಂಟೆ ಸ್ಪೋರ್ಟ್ ಕಾರಿನಲ್ಲಿ ಮಲ್ಟಿ ಲಿಂಕ್ ರಿಯರ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಜೋಡಣೆ ಮಾಡಲಾಗಿದೆ. ಅಲ್ಲದೆ ನಿರ್ವಹಣೆಯಲ್ಲೂ ಯಾವುದೇ ರಾಜಿಗೂ ತಯಾರಾಗಿಲ್ಲ.

ನೋಟದಲ್ಲೂ ಸಾಮಾನ್ಯ ಎಲಂಟ್ರಾಗಿಂತಲೂ ವಿಭಿನ್ನತೆಯನ್ನು ನೂತನ ಅವಂಟೆ ಸ್ಪೋರ್ಟ್ ಕಾಪಾಡಿಕೊಂಡಿದೆ. ಆಕ್ರಮಣಕಾರಿ ಬಂಪರ್ ಹಾಗೂ ಹೆಚ್ಚು ಶಕ್ತಿಶಾಲಿ ಎಂಜಿನ್ ಪ್ರಮುಖ ಆಕರ್ಷಣೆಯಾಗಲಿದೆ.

ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, 18 ಇಂಚುಗಳ ಅಲಾಯ್ ವೀಲ್, ಎಲ್ಇಡಿ ಟೈಲ್ ಲ್ಯಾಂಪ್, ಟ್ವಿನ್ ಎಕ್ಸಾಸ್ಟ್, ಸ್ಪೋರ್ಟಿ ಪ್ಯಾಕೇಜ್, ಕಾರ್ಬನ್ ಫೈಬರ್ ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಅಂದ ಹಾಗೆ ಭಾರತಕ್ಕೆ ಎಲಂಟ್ರಾ ಸ್ಪೋರ್ಟ್ ಆವೃತ್ತಿಯು ಯಾವಾಗ ಪ್ರವೇಶಿಸಲಿದೆ ಎಂಬುದಕ್ಕೆ ಯಾವುದೇ ಮಾಹಿತಿಗಳಿಲ್ಲ. ಈ ಸಂಬಂಧ ಹ್ಯುಂಡೈ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ.


Click it and Unblock the Notifications