2017ರಲ್ಲಿ ತ್ರಿವಳಿ ಹ್ಯುಂಡೈ ಕಾರುಗಳ ಬಿಡುಗಡೆ
2017ನೇ ಸಾಲಿನಲ್ಲಿ ಮೂರು ಪರಿಷ್ಕೃತ ಕಾರುಗಳನ್ನು ಹ್ಯುಂಡೈ ಪರಿಚಯಿಸಲಿದೆ.
ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಸಂಸ್ಥೆ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ, ಮಾರುಕಟ್ಟೆಯಲ್ಲಿ ತಾಜಾತನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಇದರ ಭಾಗವಾಗಿ ಪ್ರಸಕ್ತ ಸಾಲಿನಲ್ಲಿ ನವೀಕೃತ ಎಲಂಟ್ರಾ ಪ್ರೀಮಿಯಂ ಸೆಡಾನ್ ಕಾರು ಮತ್ತು ಟಕ್ಸನ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿದೆ.

ಈಗ ಭಾರತದಲ್ಲಿರುವ ಮೂರು ಜನಪ್ರಿಯ ಮಾದರಿಗಳಿಗೆ ಹೊಸ ರೂಪವನ್ನು ನೀಡಲು ಹ್ಯುಂಡೈ ಮುಂದಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ 2017ನೇ ಸಾಲಿನಲ್ಲಿ ಮೂರು ಆಕರ್ಷಕ ಮಾದರಿಗಳು ಬಿಡುಗಡೆಯಾಗಲಿದೆ.

ಭಾರತದಲ್ಲಿ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿರುವ ಗ್ರಾಂಡ್ ಐ10, ಎಕ್ಸ್ ಸೆಂಟ್ ಮತ್ತು ವೆರ್ನಾ ಕಾರುಗಳನ್ನು ಮುಂದಿನ ಸಾಲಿನಲ್ಲಿ ಹ್ಯುಂಡೈ ಬಿಡುಗಡೆ ಮಾಡಲಿದೆ.

2016 ಪ್ಯಾರಿಸ್ ಮೋಟಾರು ಶೋದಲ್ಲಿ ಗ್ರಾಂಡ್ ಐ10 ನವೀಕೃತ ಆವೃತ್ತಿಯು ಮೊದಲ ಬಾರಿಗೆ ಪ್ರದರ್ಶನ ಕಂಡಿದೆ. ಪ್ರಸ್ತುತ ಕಾರೀಗ ಭಾರತದತ್ತ ಹೆಜ್ಜೆಯನ್ನಿಡಲಿದೆ.

ಹೊಸತಾದ ಬಂಪರ್, ಎಲ್ ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಹೊಸತಾದ ಅಲಾಯ್ ಚಕ್ರಗಳು, ಸ್ಪಾಯ್ಲರ್ ಮತ್ತು ಹಿಂಭಾಗದಲ್ಲಿ ವಿಂಡೋ ಡಿಸೈನ್ ಗಳಲ್ಲಿ ಬದಲಾವಣೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ಕಾರಿನೊಳಗೂ ಹೆಚ್ಚು ಐಷಾರಾಮಿ ನೋಟವನ್ನು ನೀಡಲಾಗುವುದು. ಇದರಂಗವಾಗಿ ಹೊಸ ಹೋದಿಕೆ, ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ ಮತ್ತು ನೇವಿಗೇಷನ್ ಸಿಸ್ಟಂಗಳಿರಲಿದೆ.

ಇನ್ನು ಗ್ರಾಂಡ್ ಐ10 ತಾಂತ್ರಿಕತೆಯಲ್ಲೂ ಬದಲಾವಣೆ ಕಂಡುಬರುವ ಸಾಧ್ಯತೆಗಳಿವೆ. ಈ ಬಗ್ಗೆ ಹ್ಯುಂಡೈ ಇನ್ನಷ್ಟೇ ಖಚಿತಪಡಿಸಬೇಕಿದೆ.

ಅತ್ತ 2017ನೇ ಸಾಲಿನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿಕೊಳ್ಳಲು ಹ್ಯುಂಡೈ ಎಕ್ಸ್ ಸೆಂಟ್ ತಯಾರಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕೊಂಚ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಎಕ್ಸ್ ಸೆಂಟ್ ಗೆ ಹೊಸ ರೂಪಕ್ಕೆ ಬದಲಾಗುವುದು ಅನಿವಾರ್ಯವೆನಿಸಿದೆ.

ಗ್ರಾಂಡ್ ಐ10 ಮಾದರಿಗೆ ಸಮಾನವಾದ ಬದಲಾವಣೆಗಳನ್ನು ನೂತನ ಎಕ್ಸ್ ಸೆಂಟ್ ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಇದು ಖಾಸಗಿ ಟ್ಯಾಕ್ಸಿ ವಲಯದಲ್ಲಿ ಹೆಚ್ಚಿನ ಬೇಡಿಕೆ ಕಾಪಾಡಿಕೊಂಡಿದೆ.

ಏತನ್ಮಧ್ಯೆ ಬಹಳ ಕಾಲದಿಂದ ಕಾದು ಕುಳಿತಿರುವ 2017 ಹ್ಯುಂಡೈ ವೆರ್ನಾ ಆಗಮನಕ್ಕೆ ಸಿದ್ಧತೆಯನ್ನು ನಡೆಸುತ್ತಿದೆ. ಇದರಂಗವಾಗಿ ಚೀನಾದಲ್ಲಿ ನಡೆದ ಚೆಂಗ್ಡು ಅಂತರಾಷ್ಟ್ರೀಯ ಮೋಟಾರು ಶೋದಲ್ಲೂ ಪ್ರದರ್ಶನ ಕಂಡಿತ್ತು.

ಹೊಸತಾದ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಪರದೆ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ವ್ಯವಸ್ಥೆಗಳನ್ನು ನೂತನ ವೆರ್ನಾ ಗಿಟ್ಟಿಸಿಕೊಳ್ಳಲಿದೆ.

ನೂತನ ವೆರ್ನಾ ಹೆಚ್ಚು ಪ್ರಭಾವಶಾಲಿ ವಿನ್ಯಾಸ ನೀತಿಯನ್ನು ಅನುಸರಿಸಲಿದೆ. ಇದು ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಕಾಪಾಡಿಕೊಳ್ಳಲಿದೆ.

ನೂತನ ವೆರ್ನಾ 1.4 ಲೀಟರ್ ಮತ್ತು 1.6 ಲೀಟರ್ ಪೆಟ್ರೋಲ್ ಎಂಜಿನ್ ಗಳನ್ನು ಗಿಟ್ಟಿಸಿಕೊಳ್ಳಲಿದೆ. ಇವೆರಡು ಅನುಕ್ರಮವಾಗಿ 99 ಹಾಗೂ 121 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಭಾರತೀಯ ಮಾದರಿಯು ಈ ಎರಡು ಪೆಟ್ರೋಲ್ ಗಳ ಜೊತೆಗೆ 1.4 ಲೀಟರ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ಗಳನ್ನು ಗಿಟ್ಟಿಸಿಕೊಳ್ಳಲಿದೆ.

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮಾರುತಿ ಸುಜುಕಿ ಸಿಯಾಝ್ ಗೆ ಪ್ರತಿಸ್ಪರ್ಧೆಯಾಗಿ ನೂತನ ವೆರ್ನಾವು ಮೈಲ್ಡ್ ಹೈಬ್ರಿಡ್ ತಂತ್ರಗಾರಿಕೆಯನ್ನು ಪಡೆಯಲಿದೆ. ತನ್ಮೂಲಕ ಕೇಂದ್ರ ಸರಕಾರದ ಫೇಮ್ ಯೋಜನೆಯಡಿಯಲ್ಲಿ ವಿಶೇಷ ಸಬ್ಸಿಡಿ ದೊರಕುವುದರೊಂದಿಗೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಲಿದೆ.


Click it and Unblock the Notifications








