ಕ್ರಾಸೋವರ್ ಶೈಲಿಯ ಸಣ್ಣ ಕಾರು ಬಿಡುಗಡೆ ಮಾಡಲಿರುವ ಹ್ಯುಂಡೈ
ರೆನೊ ಕ್ವಿಡ್ ಯಶಸ್ಸಿನಿಂದ ಎಚ್ಚೆತ್ತುಕೊಂಡಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯೀಗ ಮಗದೊಂದು ಸಣ್ಣ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ನೂತನ ಹ್ಯುಂಡೈ ಕಾರು ಕ್ವಿಡ್ ತರಹನೇ ಕ್ರಾಸೋವರ್ ವಿನ್ಯಾಸವನ್ನು ಮೈಗೂಡಿಸಿಕೊಳ್ಳಲಿದೆ.
ಮಾರುತಿ ಆಲ್ಟೊ ಮತ್ತು ಹ್ಯುಂಡೈ ಇಯಾನ್ ಪ್ರತಿಸ್ಪರ್ಧಿಯಾಗಿ ಕಳೆದ ವರ್ಷ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ರೆನೊ ಕ್ವಿಡ್ ಸಣ್ಣ ಅವಧಿಯಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿರುವುದಲ್ಲದೆ ಗರಿಷ್ಠ ಮಾರಾಟವನ್ನು ದಾಖಲಿಸುತ್ತಿದೆ.

ಹ್ಯುಂಡೈ ನೂತನ ಕಾರು 'ಎಚ್' ಎಂಬ ಕೋಡ್ ಪಡೆದಿದ್ದು, 2018ರ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಕಾರಿನ ವಿನ್ಯಾಸವಾಗಲಿ ಅಥವಾ ಎಂಜಿನ್ ಇತ್ಯಾದಿ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಸದ್ಯಕ್ಕೆ ಅಲಭ್ಯವಾದರೂ ಭಾರತದಂತಹ ಬೆಳೆದು ಬರುತ್ತಿರುವ ಮಾರುಕಟ್ಟೆಯನ್ನು ಹ್ಯುಂಡೈ ಗುರಿಯಾಗಿರಿಸಿಕೊಳ್ಳಲಿದೆ.

ಕ್ರಾಸೋವರ್ ಮತ್ತು ಎಸ್ ಯುವಿ ಶೈಲಿಯ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹವೆನಿಸುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಹ್ಯುಂಡೈ ಸಣ್ಣ ಕಾರು ವಿಭಾಗದಲ್ಲಿ ಕ್ರಾಸೋವರ್ ಶೈಲಿಯ ವಿನ್ಯಾಸಗೊಳಿಸುತ್ತಿದೆ.

ಭವಿಷ್ಯದ ಸುರಕ್ಷಾ ಮಾನದಂಡಗಳನ್ನೆಲ್ಲ ಪಾಲಿಸಿಕೊಂಡು ಹೆಚ್ಚು ಪ್ರೀಮಿಯಂ ಸೌಲಭ್ಯಗಳೊಂದಿಗೆ ಹ್ಯುಂಡೈ ಸಣ್ಣ ಕಾರು ಮಾರುಕಟ್ಟೆ ಪ್ರವೇಶವಾಗಲಿದೆ. ಅಲ್ಲದೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ವಾರ್ಷಿಕವಾಗಿ 95,000 ಯುನಿಟ್ ಗಳಿಂದ ಒಂದು ಲಕ್ಷದಷ್ಟು ಯುನಿಟ್ ಗಳನ್ನು ಮಾರಾಟ ಮಾಡುವ ಯೋಜನೆಯನ್ನು ಹ್ಯುಂಡೈ ಹೊಂದಿದೆ.


Click it and Unblock the Notifications