ಟೆಸ್ಟಿಂಗ್ ವೇಳೆ ಮತ್ತೆ ಕ್ಯಾಮೆರಾಗೆ ಸೆರೆ ಸಿಕ್ಕಿದ ಮಾರುತಿ ಇಗ್ನಿಸ್
ಬಹುನಿರೀಕ್ಷಿತ ಮಾರುತಿ ಸುಜುಕಿ ಇಗ್ನಿಸ್ ಮಗದೊಮ್ಮೆ ಪರೀಕ್ಷಾರ್ಥ ಚಾಲನೆಯ ವೇಳೆ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದೆ0. ಇದೇ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆ ನಿರೀಕ್ಷೆ ಹೊಂದಿರುವ ಮಾರುತಿ ಇಗ್ನಿಸ್ ಟೆಸ್ಟಿಂಗ್ ಕಾರ್ಯವು ಭರದಿಂದ ಸಾಗುತ್ತಿದೆ.
ಇದಕ್ಕೂ ಮೊದಲು ವಿಟಾರಾ ಬ್ರಿಝಾ ಹಾಗೂ ಬಲೆನೊ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಇಗ್ನಿಸ್ ಕ್ರಾಸೋವರ್ ಎಸ್ ಯುವಿ ಬಿಡುಗಡೆ ವಿಳಂಬವಾಗುವ ಬಗ್ಗೆ ಸೂಚನೆಯಿತ್ತು. ಬಳಿಕ ಈ ಸುದ್ದಿಯನ್ನು ಅಲ್ಲಗಳೆದಿದ್ದ ಸಂಸ್ಥೆಯು ಪ್ರಸಕ್ತ ಸಾಲಿನಲ್ಲೇ ಇಗ್ನಿಸ್ ಬಿಡುಗಡೆ ಮಾಡುವುದಾಗಿ ಖಚಿತಪಡಿಸಿತ್ತು.

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಮಾರುತಿ ಇಗ್ನಿಸ್ ಕಾನ್ಸೆಪ್ಟ್ ಕಾರಿನಲ್ಲಿರುವದಕ್ಕೆ ಸಮಾನವಾದ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಹೊರಗಿನ ರಿಯರ್ ವ್ಯೂ ಮಿರರ್ ನಲ್ಲಿ ಟರ್ನ್ ಸಿಗ್ನಲ್ ಲಗತ್ತಿಸಲಾಗಿದ್ದು, ಹೆಚ್ಚು ಆಕರ್ಷಣೆ ಕಾಪಾಡಿಕೊಂಡಿದೆ. ಇನ್ನು ಕಪ್ಪು ವರ್ಣದ ಅಲಾಯ್ ವೀಲ್ ಕೂಡಾ ಜೋಡಿಸಲಾಗಿದೆ.

ನೂತನ ಮಾರುತಿ ಇಗ್ನಿಸ್ 3,700 ಎಂಎಂ ಉದ್ದ, 1,600 ಎಂಎಂ ಅಗಲ ಹಾಗೂ 1595 ಎಂಎಂ ಎತ್ತರವನ್ನು ಪಡೆಯಲಿದೆ. ಹಾಗೆಯೇ 2435 ಎಂಎಂ ಚಕ್ರಾಂತರ ಹಾಗೂ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಸಹ ಇರಲಿದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಕೀಲೆಸ್ ಎಂಟ್ರಿ ಜೊತೆ ಎಂಜಿನ್ ಸ್ಟ್ಯಾರ್ಟ್ ಸ್ಟಾಪ್ ಸಿಸ್ಟಂ, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಸ್ಮಾರ್ಟ್ ಲಿಂಕ್ ಹಾಗೂ ಆಪಲ್ ಕಾರ್ ಪ್ಲೇ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಡ್ಯುಯಲ್ ಏರ್ ಬ್ಯಾಗ್ ಹಾಗೂ ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಪಡೆಯಲಿದೆ.

ಕಾರಿನಡಿಯಲ್ಲಿ 1.0 ಲೀಟರ್ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಇರಲಿದೆ. ಇದು ಇನ್ನಷ್ಟೇ ಬಿಡುಗಡೆಯಾಗಲಿರುವ ಬಲೆನೊ ಆರ್ ಎಸ್ ಮಾದರಿಗೆ ಸಮಾನವಾಗಿರಲಿದೆ. ಹಾಗೆಯೇ ನಿಕಟ ಭವಿಷ್ಯದಲ್ಲೇ ಡೀಸೆಲ್ ಎಂಜಿನ್ ಆಳವಡಿಸಲಾಗುವುದು.

5 ಸ್ಪೀಡ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡುವ ಇಗ್ನಿಸ್ ಸಿವಿಟಿ ಅಥವಾ ಎಎಂಟಿ ಟ್ರಾನ್ಸ್ ಮಿಷನ್ ಪಡೆಯುವ ಸಾಧ್ಯತೆಯೂ ಇದೆ. ಅತ್ತ ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವೂ ಆಳವಡಿಕೆಯಾದ್ದಲ್ಲಿ ಅಚ್ಚರಿಪಡಬೇಕಿಲ್ಲ.

ಮುಂದಿನ ತಿಂಗಳಲ್ಲಿ ನಡೆಯಲಿರುವ ಪ್ಯಾರಿಸ್ ಮೋಟಾರ್ ಶೋದಲ್ಲೂ ಮಾರುತಿ ಇಗ್ನಿಸ್ ಭರ್ಜರಿ ಪ್ರದರ್ಶನ ಕಾಣಲಿದೆ.

ಅಂದ ಹಾಗೆ ಮಾರುತಿ ಸುಜುಕಿ ಇಗ್ನಿಸ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 4.5 ಲಕ್ಷ ರುಪಾಯಿಗಳಿಂದ 7 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಪ್ರಮುಖವಾಗಿಯೂ ಮಹೀಂದ್ರ ಕೆಯುವಿ100 ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications