ನೆಕ್ಸಾ ಹಾದಿ ಹಿಡಿಯಲಿರುವ ಮಾರುತಿಯ ಮುಂಬರುವ ಮೂರು ಕಾರುಗಳು
2017ನೇ ಸಾಲಿನಲ್ಲಿ ಮಾರುತಿ ನೆಕ್ಸಾ ಶೋ ರೂಂಗಳನ್ನು ಮತ್ತಷ್ಟು ಮೂರು ಹೊಚ್ಚ ಹೊಸ ಕಾರುಗಳು ತಲುಪಲಿದೆ.
ವಾಹನ ಖರೀದಿಗಾರರ ಉತ್ಕೃಷ್ಟ ಅನುಭವಕ್ಕಾಗಿ ಮಾರುತಿ ಸುಜುಕಿ ಪ್ರೀಮಿಯಂ ನೆಕ್ಸಾ ಶೋ ರೂಂ ತೆರೆದುಕೊಂಡಿತ್ತು. ಪ್ರಸ್ತುತ ನೆಕ್ಸಾ ಮುಖಾಂತರ ಎರಡು ಕಾರುಗಳನ್ನು ಮಾರಾಟ ಮಾಡುತ್ತಿರುವ ಮಾರುತಿ, ಈ ಸಾಲಿಗೆ ಮತ್ತಷ್ಟು ಮೂರು ಕಾರುಗಳನ್ನು ಸೇರ್ಪಡೆಗೊಳಿಸಲಿದೆ.

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಮತ್ತು ಇಗ್ನಿಸ್ ಕಾರುಗಳನ್ನು ಅನಾವರಣಗೊಳಿಸಿತ್ತು. ಇವೆರಡು ಮಾದರಿಗಳ ಜೊತೆಗೆ ನವೀಕೃತ ಸಿಯಾಝ್ ಆವೃತ್ತಿಗಳು ನೆಕ್ಸಾ ಶೋ ರೂಂಗಳನ್ನು ತಲುಪಲಿದೆ.

2017ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಈ ಮೂರು ಕಾರುಗಳು ನೆಕ್ಸಾ ಹಾದಿಯ ಮುಖಾಂತರ ಮಾರಾಟವಾಗಲಿದೆ. ಇದು ನೆಕ್ಸಾ ಪಾಲಿಗೆ ದೊಡ್ಡ ಉತ್ತೇಜನವನ್ನೇ ತುಂಬಲಿದೆ.

ಸದ್ಯ ನೆಕ್ಸಾ ಶೋ ರೂಂಗಳ ಮುಖಾಂತರ ಎಸ್ ಕ್ರಾಸ್ ಮತ್ತು ಬಲೆನೊ ಕಾರುಗಳನ್ನು ಮಾರಾಟ ಮಾಡುತ್ತಿದೆ. ಪ್ರೀಮಿಯಂ ಕಾರುಗಳ ಮಾರಾಟಕ್ಕಾಗಿ ಮಾರುತಿ ತೆರೆದುಕೊಂಡಿರುವ ನೆಕ್ಸಾ ಶೋ ರೂಂಗಳು ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಿದೆ.

ಬಲೆನೊ ಆರ್ ಎಸ್, ಇಗ್ನಿಸ್ ಹಾಗೂ ಸಿಯಾಝ್ ಫೇಸ್ ಲಿಫ್ಟ್ ಮಾದರಿಗಳು ನೆಕ್ಸಾ ಶೋ ರೂಂಗಳನ್ನು ತಲುಪಲಿರುವುದರಿಂದ ಈ ಎಲ್ಲ ಮಾದರಿಗಳಲ್ಲೂ ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನಿರೀಕ್ಷೆ ಮಾಡಬಹುದಾಗಿದೆ.

ಬಲೆನೊದ ಕ್ರೀಡಾತ್ಮಕ ಆವೃತ್ತಿಯಾಗಿರುವ ಆರ್ ಎಸ್, ವಿಶೇಷ ಬಾಡಿ ಕಿಟ್ ಗಳನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ನಿರ್ವಹಣೆಯು ಪ್ರಮುಖ ಆಕರ್ಷಣೆಯಾಗಲಿದೆ.

ಮಾರುತಿ ಬಲೆನೊ ಆರ್ ಎಸ್ ಮಾದರಿಯು 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಗಿಟ್ಟಿಸಿಕೊಳ್ಳಲಿದ್ದು, 170 ಎನ್ ಎಂ ತಿರುಗುಬಲದಲ್ಲಿ 109 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅತ್ತ ಮಿನಿ ಎಸ್ ಯುವಿ ಸ್ಥಾನವನ್ನು ತುಂಬಿಕೊಳ್ಳಲಿರುವ ಮಾರುತಿ ಇಗ್ನಿಸ್, ವರ್ಧಿತ ಗ್ರೌಂಡ್ ಕ್ಲಿಯರನ್ಸ್ ಹಾಗೂ ಆಫ್ ರೋಡ್ ರಸ್ತೆ ಸಾನಿಧ್ಯವನ್ನು ಗಿಟ್ಟಿಸಿಕೊಳ್ಳಲಿದೆ.

ಇನ್ನೊಂದೆಡೆ 2014ನೇ ಇಸವಿಯಲ್ಲಿ ಬಿಡುಗಡೆಯಾಗಿರುವ ಮಾರುತಿ ಸಿಯಾಝ್ 2015ರಲ್ಲಿ ಎಸ್ ಎಚ್ ವಿಎಸ್ ಹೈಬ್ರಿಡ್ ಮಾದರಿಯನ್ನು ಪರಿಚಯಿಸಿತ್ತು. ಈಗ ಗ್ರಾಹಕರಿಗೆ ಮತ್ತಷ್ಟು ಪ್ರೀಮಿಯಂ ನೀಡಲು ಮುಂದಾಗುತ್ತಿರುವ ಸಿಯಾಝ್, ನೆಕ್ಸಾ ಮುಖಾಂತರ ಮಾರಾಟವನ್ನು ಗುರಿಯಾಗಿಸಲಿದೆ.

ಇವೆಲ್ಲದರೊಂದಿಗೆ ನೆಕ್ಸಾ ಮುಖಾಂತರ ಮಾರಾಟವಾಗಲಿರುವ ಮಾರುತಿ ಕಾರುಗಳ ಸಂಖ್ಯೆ ಐದಕ್ಕೆ ಏರಿಕೆಯಾಗಲಿದೆ.


Click it and Unblock the Notifications








