ಇನ್ಯಾಕೆ ಚಿಂತೆ! ಬರುತ್ತಿದೆ ಮಾರುತಿ ಬಲೆನೊ ಹೈಬ್ರಿಡ್ ಕಾರು
ಪರಿಸರ ಸ್ನೇಹಿ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಲೆನೊ ಮುಖಾಂತರ ಮಾರುತಿ ಮಾರಾಟ ಕುದುರಿಸಿಕೊಳ್ಳುವ ಇರಾದೆಯಲ್ಲಿದೆ.
ಪರಸರ ಸ್ನೇಹಿ ಕಾರುಗಳತ್ತ ವಾಲುತ್ತಿರುವ ದೇಶದ ಅತಿ ದೂಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಹ ತನ್ನ ಜನಪ್ರಿಯ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನಲ್ಲೂ ಹೈಬ್ರಿಡ್ ತಂತ್ರಗಾರಿಕೆಯನ್ನು ಪರಿಚಯಿಸಲಿದೆ. ಮಾರುತಿ ಅಂಗಸಂಸ್ಥೆಯಾಗಿರುವ ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (ಎಸ್ ಎಚ್ ವಿಎಸ್) ತಂತ್ರಜ್ಞಾನವು ಬಲೆನೊದಲ್ಲಿ ಬಳಕೆಯಾಗಲಿದೆ.

ಮಾರುತಿ ಬಲೆನೊದ ಡೀಸೆಲ್ ಕಾರಿನಲ್ಲಿ ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಗಾರಿಕೆಯು ಬಳಕೆಯಾಗಲಿದೆ. ತನ್ಮೂಲಕ ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲಿದೆ.

ಫಿಯೆಟ್ ನಿಂದ ಆಮದು ಮಾಡಲಾಗುವ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಮಾರುತಿ ಬಲೆನೊ ಕಾರಿನಡಿಯಲ್ಲಿ ಜೋಡಣೆಯಾಗಲಿದೆ. ಇದು 190 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿಮ್ಮ ಮಾಹಿತಿಗಾಗಿ ಭಾರತದಲ್ಲಿರುವ ಮಾರುತಿ ಎರ್ಟಿಗಾ ಮತ್ತು ಮಾರುತಿ ಸಿಯಾಝ್ ಕಾರಿನಲ್ಲೂ ಮೈಲ್ಡ್ ಹೈಬ್ರಿಡ್ ವ್ಯವಸ್ಥೆಯು ಬಳಕೆಯಾಗುತ್ತಿದೆ.

ಕೇಂದ್ರ ಸರಕಾರದ ಫೇಮ್ ಯೋಜನೆಯಡಿಯಲ್ಲಿ ಸರಿ ಸುಮಾರು 13,000 ರು.ಗಳಷ್ಟು ಸಬ್ಸಿಡಿ ಗಿಟ್ಟಿಸಿಕೊಳ್ಳಲು ಸ್ಮಾರ್ಟ್ ಹೈಬ್ರಿಡ್ ಕಾರುಗಳಿಗೆ ಸಾಧ್ಯವಾಗಲಿದೆ.

ಸದ್ಯ ಬಲೆನೊ ಪ್ರತಿ ಲೀಟರ್ ಗೆ 27.39 ಕೀ.ಮೀ. ಗಳಷ್ಟು ಇಂಧನ ಕ್ಷಮತೆ ನೀಡುತ್ತಿದೆ. ನೂತನ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಇಂಧನ ಕ್ಷಮತೆಯು ಮತ್ತಷ್ಟು ಶೇಕಡಾ 10ರಷ್ಟು ಹೆಚ್ಚಲಿದೆ.

ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಸಿಸ್ಟಂ, ಸ್ಟ್ಯಾರ್ಟರ್ ಜನರೇಟರ್, ಬ್ರೇಕ್ ಎನರ್ಜಿ ರಿಕವರಿ ಸಿಸ್ಟಂ ಮತ್ತು ಆಟೋ ಸ್ಟ್ಯಾರ್ಟ್ ಸ್ಟಾಪ್ ವ್ಯವಸ್ಥೆಗಳನ್ನು ಒಳಗೊಂಡಿದೆ.

ಬಲೆನೊ ಹೈಬ್ರಿಡ್ ಮಾದರಿಯ ಹೊರತಾಗಿ ಹೆಚ್ಚು ಶಕ್ತಿಶಾಲಿ ಬಲೆನೊ ಆರ್ ಎಸ್ ಮಾದರಿಯ ನಿರ್ಮಾಣದಲ್ಲಿ ಮಾರುತಿ ತೊಡಗಿಸಿಕೊಂಡಿದೆ. ಬಲೆನೊ ಆರ್ ಎಸ್ 1.0 ಲೀಟರ್ ಟರ್ಬೊಚಾರ್ಜ್ಡ್ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ.

ಮಾರುತಿ ಇಗ್ನಿಸ್ ಜೊತೆಗೆ ಬಲೆನೊ ಆರ್ ಎಸ್ ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಬಿಡುಗಡೆಯಾಗಲಿದೆ. ಹಾಗೆಯೇ ಬಲೆನೊ ಹೈಬ್ರಿಡ್ ವರ್ಷನ್ ಮುಂದಿನ ವರ್ಷ ಆಗಮನವಾಗಲಿದೆ.

2015 ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಮಾರುತಿ ಬಲೆನೊ, ಪ್ರೀಮಿಯಂ ನೆಕ್ಸಾ ಡೀಲರ್ ಶಿಪ್ ಮುಖಾಂತರ ಮಾರಾಟವಾಗುತ್ತಿದೆ. ಅಲ್ಲದೆ ಕಾಯುವಿಕೆ ಅವಧಿಯು ನಾಲ್ಕು ತಿಂಗಳುಗಳ ವರೆಗೆ ವಿಸ್ತರಿಸಿದೆ.


Click it and Unblock the Notifications








