ವಿಳಂಬವಿಲ್ಲ; ನಿಗದಿತ ಸಮಯದಲ್ಲೇ ಮಾರುತಿ ಇಗ್ನಿಸ್ ಬಿಡುಗಡೆ
ಅತಿ ಹೆಚ್ಚು ಮಾರಾಟದಲ್ಲಿರುವ ಮಾರುತಿ ಬ್ರಿಝಾಗೆ ಹಾದಿ ಬಿಟ್ಟುಕೊಡುವ ಹಿನ್ನಲೆಯಲ್ಲಿ ಬಹುನಿರೀಕ್ಷಿತ ಇಗ್ನಿಸ್ ಬಿಡುಗಡೆ ಮುಂದಿನ ವರ್ಷಕ್ಕೆ ಮುಂದೂಡಲಾಗಿಯೆಂಬ ವರದಿಗಳು ಹಬ್ಬಿದ್ದವು. ಆದರೆ ಈಗ ಬಂದಿರುವ ತಾಜಾ ವರದಿಗಳ ಪ್ರಕಾರ ಮಾರುತಿ ಇಗ್ನಿಸ್ ನಿಗದಿತ ಸಮಯದಲ್ಲೇ ಭಾರತಕ್ಕೆ ಪ್ರವೇಶಿಸಲಿದೆ.
ಮಾರುತಿಯಿಂದ ಬಂದಿರುವ ಮಾಹಿತಿಗಳ ಪ್ರಕಾರ ಇಗ್ನಿಸ್ ಮುಂಬರುವ ಹಬ್ಬದ ಆವೃತ್ತಿಯ ವೇಳೆಯಲ್ಲಿ ಬಿಡುಗಡೆಯಾಗಲಿದೆ. ಇದು ಸಂಸ್ಥೆಯ ಪ್ರೀಮಿಯಂ ನೆಕ್ಸಾ ಡೀಲರ್ ಶಿಪ್ ಮುಖಾಂತರ ಮಾರಾಟವಾಗಲಿದೆ.

ಇದಕ್ಕೂ ಮೊದಲು ವಿಟಾರಾ ಬ್ರಿಝಾ ಹಾಗೂ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಇಗ್ನಿಸ್ ಬಿಡುಗಡೆ ವಿಳಂಬವಾಗಲಿದೆಯೆಂಬ ವರದಿಗಳು ಬಂದಿದ್ದವು.

ಪ್ರಮುಖವಾಗಿಯೂ ಬುಕ್ಕಿಂಗ್ ಹೆಚ್ಚಿದ್ದರಿಂದ ಬ್ರಿಝಾ ಹಾಗೂ ಬಲೆನೊ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲು ಮಾರುತಿ ಮುಂದಾಗಿತ್ತು. ಇದರಿಂದಾಗಿ ಇಗ್ನಿಸ್ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ಬಗ್ಗೆ ಭೀತಿಯಿತ್ತು.

ಕ್ರಾಸೋವರ್ ಶೈಲಿಯ ಮಾರುತಿ ಇಗ್ನಿಸ್ ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿರುವ ತಾಜಾ ಮಹೀಂದ್ರ ಕೆಯುವಿ100 ಇತ್ಯಾದಿ ವಾಹನಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಸಮಕಾಲೀನ ವಿನ್ಯಾಸ, ವರ್ಧಿತ ಗ್ರೌಂಡ್ ಕ್ಲಿಯರನ್ಸ್, ದೊಡ್ಡದಾದ ವಿಂಡ್ ಶೀಲ್ಡ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಆಕರ್ಷಕ ಫ್ರಂಟ್ ಗ್ರಿಲ್, ಡೇಟೈಮ್ ರನ್ನಿಂಗ್ ಎಲ್ ಇಡಿ, ವೀಲ್ ಆರ್ಚ್, ಟೈಲ್ ಲ್ಯಾಂಪ್ ಇತ್ಯಾದಿ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ಅಂದ ಹಾಗೆ ಮಾರುತಿ ಇಗ್ನಿಸ್ 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಗೇರ್ ಬಾಕ್ಸ್ ಪಡೆಯುವ ಸಾಧ್ಯತೆಯಿದ್ದು, ನಾಲ್ಕರಿಂದ ಆರು ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications








