ಹಬ್ಬದ ಸಂಭ್ರಮ; ಮಾರುತಿ ಕಾರುಗಳ ಜಿಗಿತ
ಹಬ್ಬದ ಆವೃತ್ತಿ ಆರಂಭವಾಗಿರುವಂತೆಯೇ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ದಾಖಲೆ ಸಂಖ್ಯೆಯ ಮಾರಾಟವನ್ನು ಗಿಟ್ಟಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಮಾರುತಿ ಸುಜುಕಿ ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಶೇಕಡಾ 29.4 ರಷ್ಟು ಏರುಗತಿಯನ್ನು ಸಾಧಿಸಿದೆ.

2016 ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಒಟ್ಟು 1,37,321 ಯುನಿಟ್ ಗಳ ಮಾರಾಟವನ್ನು ಗಿಟ್ಟಿಸಿಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,06,083 ಯುನಿಟ್ ಗಳ ಮಾರಾಟ ಮಾತ್ರ ಸಾಧಿಸಿತ್ತು.

ಜುಲೈ ತಿಂಗಳಲ್ಲಿ 1,25,778 ಯುನಿಟ್ ಗಳ ಮಾರಾಟ ದಾಖಲಿಸಿರುವುದು ಮಾರುತಿಯ ಪ್ರಸಕ್ತ ಸಾಲಿನ ಗರಿಷ್ಠ ಸಾಧನೆಯಾಗಿತ್ತು. ಇದನ್ನೀಗ ಸೆಪ್ಟೆಂಬರ್ ತಿಂಗಳಲ್ಲಿ ಹಿಮ್ಮೆಟ್ಟಿಸಿದೆ.

ಮಾರುತಿ ಸುಜುಕಿ ಬಲೆನೊ, ವಿಟಾರಾ ಬ್ರಿಝಾ, ಸಿಯಾಝ್ ಮಾದರಿಗಳು ಗಮನಾರ್ಹ ಮಾರಾಟವನ್ನು ಸಾಧಿಸುತ್ತಿರುವುದು ಏರುಗತಿಗೆ ಸಾಧಿಸುತ್ತಿದೆ.

ಆಲ್ಟೊ ಹಾಗೂ ವ್ಯಾಗನಾರ್ ಸಹ ಮಾರಾಟದಲ್ಲಿ ಏರುಗತಿಯನ್ನು ಕಂಡಿದೆ. ಇವೆರಡು ಜೊತೆ ಸೇರಿ 44,395 ಯುನಿಟ್ ಗಳ ಮಾರಾಟ ಸಾಧಿಸಿದೆ. ಕಳೆದ ಸಾಲಿನಲ್ಲಿದ್ದು 35,570 ಯುನಿಟ್ ಗಳಾಗಿತ್ತು. ಈ ಮೂಲಕ ಶೇಕಡಾ 24.8ರಷ್ಟು ಏರಿಕೆಯನ್ನು ಕಂಡಿದೆ.

ಅತ್ತ ಕಾಂಪಾಕ್ಟ್ ವಿಭಾಗದ ಕಾರುಗಳಾದ ಸ್ವಿಫ್ಟ್, ರಿಟ್ಜ್, ಸೆಲೆರಿಯೊ, ಬಲೆನೊ ಹಾಗೂ ಡಿಜೈರ್ ಮಾದರಿಗಳು ಜಂಟಿಯಾಗಿ 50,324 ಯುನಿಟ್ ಗಳ ಮಾರಾಟವನ್ನು ಸಾಧಿಸಿದೆ. ಕಳೆದ ವರ್ಷ ಇದೇ ಸಾಲಿನಲ್ಲಿ 44,826 ಯುನಿಟ್ ಗಳಷ್ಟೇ ಮಾರಾಟವಾಗಿದ್ದವು. ತನ್ಮೂಲಕ ಶೇಕಡಾ 12.3ರಷ್ಟು ಏರಿಕೆಯನ್ನು ದಾಖಲಿಸಿದೆ.

ಹಾಗೆಯೇ ಉಪಯುಕ್ತ ವಿಭಾಗದಲ್ಲಿ ಜಿಪ್ಸಿ, ಎಸ್ ಕ್ರಾಸ್, ವಿಟಾರಾ ಬ್ರಿಝಾ ಮತ್ತು ಎರ್ಟಿಗಾ ಒಟ್ಟು ಸೇರಿ 18,423 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ. ಕಳೆದ ವರ್ಷವಿದು 6,331 ಯುನಿಟ್ ಗಳಾಗಿತ್ತು. ಈ ಮೂಲಕ ಶೇಕಡಾ 191ರಷ್ಟು ಜಿಗಿತ ಸಾಧಿಸಿದೆ.

ಏತನ್ಮಧ್ಯೆ ಮಹೀಂದ್ರ ಆಂಡ್ ಮಹೀಂದ್ರ, ಫೋರ್ಡ್ ಇಂಡಿಯಾ ಮತ್ತು ಕಿರ್ಲೊಸ್ಕರ್ ಮೋಟಾರು ಸಂಸ್ಥೆಗಳು ಸಹ ಮಾರಾಟ ಏರುಗತಿಯನ್ನು ಸಾಧಿಸಿದೆ.


Click it and Unblock the Notifications








