ಸೂಪರ್ ಕ್ಯಾರಿ: ಹಗುರ ವಾಣಿಜ್ಯ ವಾಹನ ವಿಭಾಗದಲ್ಲೂ ಮಾರುತಿ ಜೈ
ಕೇವಲ ಪ್ರಯಾಣಿಕ ಕಾರು ಮಾರುಕಟ್ಟೆ ಮಾತ್ರವಲ್ಲ ವಾಣಿಜ್ಯ ವಿಭಾಗದಲ್ಲೂ ತನ್ನ ಸಾಮರ್ಥ್ಯ ತೋರಿರುವ ದೇಶದ ಜನಪ್ರಿಯ ವಾಹನ ಸಂಸ್ಥೆ ಮಾರುತಿ ಸುಜುಕಿ, ಅತಿ ನೂತನ ಸೂಪರ್ ಕ್ಯಾರಿ ಹಗುರ ವಾಣಿಜ್ಯ ವಾಹನವನ್ನು (ಎಲ್‌ಸಿವಿ) ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 4.01 ಲಕ್ಷ ರು. (ಎಕ್ಸ್ ಶೋ ರೂಂ ಲೂಧಿಯಾನಾ)
ಸೂಪರ್ ಕ್ಯಾರಿ, ಹಗುರ ವಾಣಿಜ್ಯ ವಾಹನ ವಿಭಾಗದಲ್ಲಿ ಮಾರುತಿ ಬಿಡುಗಡೆ ಮಾಡುತ್ತಿರುವ ಮೊದಲ ವಾಹನವಾಗಿದೆ. ಈ ಮೂಲಕ ಎಲ್‌ಸಿವಿ ವಿಭಾಗಕ್ಕೂ ಭರ್ಜರಿ ಎಂಟ್ರಿ ಕೊಟ್ಟಿದೆ.

ಮಾರುತಿಯ ವಾಣಿಜ್ಯ ವಾಹನ ಮಾರಾಟಕ್ಕಾಗಿ ಮೊದಲ ಮೂರು ಶೋ ರೂಂಗಳನ್ನು ಲೂಧಿಯಾನಾ, ಅಹಮದಾಬಾದ್ ಮತ್ತು ಕೋಲ್ಕತ್ತಾಗಳಲ್ಲಿ ತೆರೆಯಲಾಗಿದೆ. ಹಾಗೆಯೇ ಮುಂದಿನ ಆಗಸ್ಟ್ ತಿಂಗಳಿಂದ ಮಾರಾಟ ಪ್ರಾರಂಭವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ ಮಾರ್ಕೆಟಿಂಗ್ ಹಾಗೂ ಸೇಲ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಆರ್‌ಎಸ್ ಕಲ್ಸಿ, ಭಾರತೀಯ ಗ್ರಾಹಕರನ್ನು ಬೇಡಿಕೆಯನ್ನು ಅರ್ಥಮಾಡಿಕೊಂಡು ನಡೆಸಿರುವ ವಿವರವಾದ ಶೋಧನೆಯ ಬಳಿಕ ಸೂಪರ್ ಕ್ಯಾರಿ ಹಗುರ ಭಾರದ ವಾಣಿಜ್ಯ ವಾಹನವನ್ನು ಅಭಿವೃದ್ಧಿಗೊಳಿಸಿರುವುದಾಗಿ ತಿಳಿಸಿದ್ದಾರೆ.

793 ಸಿಸಿ ಟ್ವಿನ್ ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಾರುತಿ ಸುಜುಕಿ ಸೂಪರ್ ಕ್ಯಾರಿ, 75ಎನ್ ಎಂ ತಿರುಗುಬಲದಲ್ಲಿ 32 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರಲ್ಲಿ ಐದು ಸ್ಪೀಡ್ ಗೇರ್ ಬಾಕ್ಸ್ ಹೊಂದಿರುತ್ತದೆ.

ಆಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ (ಎಆರ್‌ಎಐ) ಮಾನ್ಯತೆಯ ಪ್ರಕಾರ ನೂತನ ಸೂಪರ್ ಕ್ಯಾರಿ ಪ್ರತಿ ಲೀಟರ್ ಗೆ 22.07 ಕೀ.ಮೀ. ಮೈಲೇಜ್ ನೀಡಲಿದ್ದು, ಪ್ರತಿ ಗಂಟೆಗೆ ಗರಿಷ್ಠ 80 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಸೂಪರ್ ಕ್ಯಾರಿ ಅಭಿವೃದ್ಧಿಗಾಗಿ ಮಾರುತಿ ಸಂಸ್ಥೆಯು ಬರೋಬ್ಬರಿ 300 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ. ಅಲ್ಲದೆ 740 ಕೆ.ಜಿ ಭಾರ ಹೊರುವ ಸಾಮರ್ಥ್ಯ ಹೊಂದಿರುತ್ತದೆ.

175 ಎಂಎಂ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿರುವ ಮಾರುತಿ ಸೂಪರ್ ಕ್ಯಾರಿ, ಮುಂಭಾಗದಲ್ಲಿ ಮ್ಯಾಕ್ ಫೆರ್ಸನ್ ಸ್ಟ್ರಟ್ಸ್ ಹಾಗೂ ಹಿಂಭಾಗದಲ್ಲಿ ರಿಜಿಡ್ ಆಕ್ಸಲ್ ಜೊತೆ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಹೊಂದಿದೆ.

4.3 ಮೀಟರ್ ಉದ್ದದ ಸೂಪರ್ ಕ್ಯಾರಿ ಗಾಡಿಯು 2110 ಎಂಎಂ ಚಕ್ರಾಂತರವನ್ನು ಪಡೆದಿರಲಿದೆ. ಅಂತೆಯೇ 14 ಇಂಚುಗಳ ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ಇನ್ನು ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಲೈಟ್ ಸ್ಟೀರಿಂಗ್ ವೀಲ್, ಮೊಬೈಲ್ ಚಾರ್ಜಿಂಗ್ ಸಾಕೆಟ್, ಡ್ಯುಯಲ್ ಅಸಿಸ್ಟ್ ಗ್ರಿಪ್, ಮಲ್ಟಿ ಪರ್ಪಸ್ ಸ್ಟೋರೆಜ್ ಜಾಗ, ಲಾಕ್ ಮಾಡಬಹುದಾದ ಗ್ಲೋವ್ ಬಾಕ್ಸ್, ಬಾಟಲಿ ಹೋಲ್ಡರ್ ಇತ್ಯಾದಿ ವ್ಯವಸ್ಥೆಗಳಿರಲಿದೆ.

ರಸ್ತೆಗಳಲ್ಲಿ ಅತ್ಯುತ್ತಮ ಸ್ಥಿರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಲೋಡ್ ಸೆನ್ಸಿಂಗ್ ಪ್ರೊಪೋರ್ಷನಿಂಗ್ ವಾಲ್ವ್ (ಎಲ್‌ಎಸ್‌ಪಿವಿ) ಬ್ರೇಕಿಂಗ್ ವ್ಯವಸ್ಥೆಯನ್ನು ಕೊಡಲಾಗಿದೆ. ಇದರ ಜೊತೆಗೆ ಮುಂಭಾಗದಲ್ಲಿ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ವ್ಯವಸ್ಥೆಯು ಇರುತ್ತದೆ.

ಸಂಸ್ಥೆಯ ಮಾನೇಸರ್ ಘಟಕದಲ್ಲಿ ನಿರ್ಮಾಣವಾಗಲಿರುವ ಸೂಪರ್ ಕ್ಯಾರಿ ಖರೀದಿ ವೇಳೆಯಲ್ಲಿ ಎರಡು ವರ್ಷಗಳ ಅಥವಾ 72,000 ಕೀ.ಮೀ.ಗಳ ವಾರಂಟಿ ಸೇವೆಯು ಲಭ್ಯವಿರುತ್ತದೆ.

ನಿಮ್ಮ ಮಾಹಿತಿಗಾಗಿ ಮಾರುತಿ ಸಂಸ್ಥೆಯು ಆಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗೆ ಹೆಚ್ಚು ಶಕ್ತಿಶಾಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ನಿಯಂತ್ರಿತ ಸೂಪರ್ ಕ್ಯಾರಿ ವಾಹನದ ರಫ್ತು ಪ್ರಕ್ರಿಯೆಯನ್ನು ಆರಂಭಿಸಿದೆ.

ಬಣ್ಣಗಳು
ಎರಡು ಆಕರ್ಷಕ ಬಣ್ಣಗಳಲ್ಲಿ ಮಾರುತಿ ಸೂಪರ್ ಕ್ಯಾರಿ ಲಭ್ಯವಾಗಲಿದೆ. ಅವುಗಳೆಂದರೆ, ಸುಪೀರಿಯರ್ ವೈಟ್ ಮತ್ತು ಸುಪೀರಿಯರ್ ಸಿಲ್ವರ್.

ಎಕ್ಸ್ ಶೋ ರೂಂ ಬೆಲೆಗಳು
ಲೂಧಿಯಾನಾ: 4.01 ಲಕ್ಷ ರು.
ಅಹಮದಾಬಾದ್: 4.03 ಲಕ್ಷ ರು.
ಕೋಲ್ಕತ್ತಾ: 4.11 ಲಕ್ಷ ರು.


Click it and Unblock the Notifications