ವಿಟಾರಾ ದಾಖಲೆ; 70,000 ಬುಕ್ಕಿಂಗ್ಸ್, ಕಾಯುವಿಕೆ ಅವಧಿ 9 ತಿಂಗಳು
ಇತ್ತೀಚೆಗಷ್ಟೇ ಭಾರತದ ನಂ.1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಅತಿ ನೂತನ ವಿಟಾರಾ ಬ್ರಿಝಾ ಕಾಂಪಾಕ್ಟ್ ಕ್ರೀಡಾ ಬಳಕೆಯ ಕಾರನ್ನು ಬಿಡುಗಡೆಗೊಳಿಸಿತ್ತು. ಇದಾದ ಬೆನ್ನಲ್ಲೇ ವಿಟಾರಾ ಬ್ರಿಝಾ ಕಾರಿಗೆ ಬೊಂಬಾಟ್ ಬೇಡಿಕೆ ದಾಖಲಾಗಿದೆ.
ವರದಿಗಳ ಪ್ರಕಾರ 2016 ಮಾರ್ಚ್ 08ರಂದು ಬಿಡುಗಡೆಗೊಂಡಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಇದುವರೆಗೆ 70,000 ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿದ್ದು, ಕಾಯುವಿಕೆ ಅವಧಿ ಎಂಟರಿಂದ ಒಂಬತ್ತು ತಿಂಗಳುಗಳ ವರೆಗೆ ವಿಸ್ತರಿಸಿದೆ.

ಬಿಡುಗಡೆಯಾದ ಎರಡು ತಿಂಗಳೊಳಗೆ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎರಡನೇ ಅತ್ಯುತ್ತಮ ಎಸ್ ಯುವಿ ಎಂಬ ಪಟ್ಟವನ್ನು ಬ್ರಿಝಾ ಆಲಂಕರಿಸಿತ್ತು.

ದುರದೃಷ್ಟವಶಾತ್ ಸುಬ್ರೊಸ್ ಮನೇಸರ್ ಘಟಕದಲ್ಲಿ ಆಗ್ನಿ ಆಕಸ್ಮಿಕ ಸಂಭವಿಸಿರುವುದರಿಂದ ವೇಟಿಂಗ್ ಪಿರೇಡ್ ಮತ್ತಷ್ಟು ವಿಸ್ತರಿಸುವ ಭೀತಿಯಿದೆ. ಮಾರುತಿಗೆ ಎಸಿ ಘಟಕ ವಿತರಣೆ ಮಾಡುವ ಪ್ರಮುಖ ಸಂಸ್ಥೆ ಇದಾಗಿದೆ.

ಜೋಡಿ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುವ ವಿಟಾರಾ ಬ್ರಿಝಾ ಟಾಪ್ ಎಂಡ್ ಝಡ್ ಡಿಐ ಮತ್ತು ಝಡ್ ಡಿಐ ಪ್ಲಸ್ ಮಾದರಿಗಳಿಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಸ್ಪರ್ಧಾತ್ಮಕ ಬೆಲೆ ಮತ್ತು ನೆಕ್ಸಾ ಬದಲಾಗಿ ಸಾಮಾನ್ಯ ಮಾರುತಿ ಶೋ ರೂಂಗಳ ಮುಖಾಂತರ ವಿತರಣೆ ಹಮ್ಮಿಕೊಂಡಿರುವುದು ಮಾರುತಿಗೆ ವರದಾನವಾಗಿದೆ.

ಬಿಡುಗಡೆ ವೇಳೆ ಫೋರ್ಡ್ ಇಕೊಸ್ಪೋರ್ಟ್ ಗಿಂತಲೂ ಒಂದರಿಂದ 1.2 ಲಕ್ಷ ರು.ಗಳಷ್ಟು ಕಡಿಮೆ ಬೆಲೆಗಳಲ್ಲಿ ಬ್ರಿಝಾವನ್ನು ಮಾರುತಿ ಕಣಕ್ಕಿಳಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಫೋರ್ಡ್ ತನ್ನ ಮಾದರಿಯ ಬೆಲೆಯನ್ನು 1.2 ಲಕ್ಷ ರು.ಗಳಷ್ಟು ಕಡಿತಗೊಳಿಸಿತ್ತು. ಅತ್ತ ಮಹೀಂದ್ರ ಟಿಯುವಿ300 ಗಿಂತಲೂ ಬ್ರಿಝಾ ವೆರಿಯಂಟ್ ಗೆ ಅನುಗುಣವಾಗಿ 12,000 ರು.ಗಳಿಂದ 25,000 ರು.ಗಳಷ್ಟು ಕಡಿಮೆ ಬೆಲೆ ಹೊಂದಿದೆ. ಮಾರುತಿ ವಿಟಾರಾ ಬ್ರಿಝಾ ದೆಹಲಿ ಎಕ್ಸ್ ಶೋ ರೂಂ ಬೆಲೆ 6.99 ಲಕ್ಷ ರು.ಗಳಿಂದ 9.68 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ದೇಶದ್ಯಾಂತ ಮಾರುತಿಗೆ 1920ರಷ್ಟು ಶೋ ರೂಂಗಳಿವೆ. ಇದು ಹ್ಯುಂಡೈ, ಮಹೀಂದ್ರ ಆಂಡ್ ಮಹೀಂದ್ರ, ಹೋಂಡಾ ಮತ್ತು ಟಾಟಾ ಮೋಟಾರ್ಸ್ ಒಟ್ಟಾರೆ ಡೀಲರ್ ಶಿಪ್ ಗಳಿಗೆ ಸಮವಾಗಿದೆ. ಅಂತೆಯೇ 70 ನಗರಗಳಲ್ಲಿ 120ರಷ್ಟು ನೆಕ್ಸಾ ಔಟ್ಲೆಟ್ ಗಳಿವೆ.

ಮಾರುತಿ ವಿಟಾರಾ ಬ್ರಿಝಾದಲ್ಲಿರುವ 1.3 ಲೀಟರ್ ಡೀಸೆಲ್ ಎಂಜಿನ್ ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

2016 ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನುಕ್ರಮವಾಗಿ 5,563 ಮತ್ತು 7,832 ಯುನಿಟ್ ಗಳಷ್ಟು ವಿಟಾರಾ ಬ್ರಿಝಾ ಮಾದರಿಗಳನ್ನು ಮಾರಾಟ ಮಾಡಲಾಗಿತ್ತು. ತಿಂಗಳಲ್ಲಿ 8500 ಯುನಿಟ್ ಗಳಷ್ಟು ವಿಟಾರಾ ಬ್ರಿಝಾ ನಿರ್ಮಿಸುತ್ತಿರುವ ಮಾರುತಿ ಭಾರಿ ಬೇಡಿಕೆಯ ಹಿನ್ನಲೆಯಲ್ಲಿ ನಿರ್ಮಾಣ ಸಾಮರ್ಥ್ಯ ವೃದ್ಧಿಸುವ ಇರಾದೆಯಲ್ಲಿದೆ.

ಇನ್ನುಳಿದಂತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ ಇಡಿ ಲೈಟ್, ಕ್ರೂಸ್ ಕಂಟ್ರೋಲ್, ಗೇರ್ ಶಿಫ್ಟ್ ಇಂಡಿಕೇಟರ್, ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ರಿವರ್ಸ್ ಕ್ಯಾಮೆರಾಗಳಂತಹ ವೈಶಿಷ್ಟ್ಯಗಳು ಮಾರುತಿ ವಿಟಾರಾ ಬ್ರಿಝಾ ಕಾರನ್ನು ಮತ್ತಷ್ಟು ವಿಶಿಷ್ಟವಾಗಿಸುತ್ತದೆ.

ಕಾರಿನ ಭದ್ರತೆಗೂ ಆದ್ಯತೆ ಕೊಡಲಾಗಿದ್ದು, ಎಲ್ಲ ವೆರಿಯಂಟ್ ಗಳಲ್ಲೂ ಚಾಲಕ ಬದಿಯ ಏರ್ ಬ್ಯಾಗ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದ್ದು, ಜೊತೆಗೆ ಮುಂಭಾಗದ ಪ್ರಯಾಣಿಕ ಏರ್ ಬ್ಯಾಗ್, ಎಬಿಎಸ್ ಮತ್ತು ಇಬಿಡಿ ಸೌಲಭ್ಯಗಳನ್ನು ಐಚ್ಛಿಕವಾಗಿ ನೀಡಲಾಗುತ್ತಿದೆ.


Click it and Unblock the Notifications