ಐ10 ಸ್ಥಾನದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಲಿರುವ ಹ್ಯುಂಡೈ ಸ್ಯಾಂಟ್ರೊ
ಹ್ಯುಂಡೈ ಸ್ಯಾಂಟ್ರೊ
ವಾಹನ ಮೂಲಗಳಿಂದ ಮಗದೊಂದು ಶುಭ ಸಮಾಚಾರ ಹೊರ ಬಂದಿದ್ದು, ಐಕಾನಿಕ್ ಹ್ಯುಂಡೈ ಸ್ಯಾಂಟ್ರೊ ಭರ್ಜರಿ ಕಮ್ ಬ್ಯಾಕ್ ಮಾಡಿಕೊಳ್ಳಲಿದೆ. ಬಲ್ಲ ಮೂಲಗಳ ಪ್ರಕಾರ ಹೊಸ ಸ್ಯಾಂಟ್ರೊ ಕಾರು ಈಗಿರುವ ಐ10 ಹ್ಯಾಚ್ ಬ್ಯಾಕ್ ಕಾರಿನ ಸ್ಥಾನವನ್ನು ತುಂಬಲಿದೆ.

ಒಂದು ಕಾಲದಲ್ಲಿ ಸಣ್ಣ ಕಾರು ವಿಭಾಗದಲ್ಲಿ ಅತಿ ಹೆಚ್ಚು ಯಶಸ್ಸನ್ನು ಸಾಧಿಸಿರುವ ಹ್ಯುಂಡೈ ಸ್ಯಾಂಟ್ರೊ, ಕ್ರಮೇಣ ಪ್ರತಿಸ್ಪರ್ಧಿಗಳ ಆಧುನಿಕ ಕಾರುಗಳ ವಿರುದ್ಧದ ಪೈಪೋಟಿಯಲ್ಲಿ ಹಿಂದೆ ಬಿದ್ದಿತ್ತು.

ಇದರಿಂದಾಗಿ ಸ್ಯಾಂಟ್ರೊ ಮಾರಾಟವನ್ನು ಹಿಂಪಡೆಯುವಲ್ಲಿ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ನಿರ್ಧರಿಸಿತ್ತು.

1990ರ ದಶಕದ ಅಂತ್ಯದಲ್ಲಿ ಮಾರುಕಟ್ಟೆಗೆ ಪ್ರೇವಶಿಸಿರುವ ಹ್ಯುಂಡೈ ಸ್ಯಾಂಟ್ರೊ, ದೇಶದ ಜನರ ಜೀವನಾಡಿಯಾಗಿತ್ತು. ಇದು ಪ್ರಬಲ ಮಾರುತಿ ಕಾರುಗಳನ್ನು ಸಮರ್ಥವಾಗಿ ಎದುರಿಸಿತ್ತು.

ವರ್ಷಗಳು ಉರುಳಿದಂತೆಯೇ ಸ್ಯಾಂಟ್ರೊ ಕಾರು ಹೆಚ್ಚು ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಐ10 ಕಾರಿಗೆ ಹಾದಿ ಬಿಟ್ಟು ಕೊಟ್ಟಿತ್ತು. ಈಗ ಐ10 ಜೀವನ ಚಕ್ರ ಕೊನೆಗೊಳ್ಳುತ್ತಿರುವಂತೆಯೇ ಸ್ಯಾಂಟ್ರೊ ಮರು ಜನ್ಮ ಪಡೆಯಲು ಸಜ್ಜಾಗುತ್ತಿದೆ.

ವಾಹನ ಮೂಲಗಳ ನಿಕಟವರ್ತಿಗಳ ಪ್ರಕಾರ ನೂತನ ಸ್ಯಾಂಟ್ರೊ 2018ನೇ ಸಾಲಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯ ಮಗ್ನವಾಗಿದೆ.

ಸಂಸ್ಥೆಯ ನೂತನ ಫ್ಯೂಯಿಡಿಕ್ 2.0 ಡಿಸೈನ್ ತಂತ್ರಗಾರಿಕೆಯಲ್ಲಿ ನೂತನ ಸ್ಯಾಂಟ್ರೊ ಕಾರು ನಿರ್ಮಾಣವಾಗಲಿದೆ. ತನ್ಮೂಲಕ ಗತ ಕಾಲದ ವೈಭವವನ್ನು ಮರುಕಳಿಸಲಿದೆ.

ನೂತನ ಸ್ಯಾಂಟ್ರೊ ಮೂರರಿಂದ ನಾಲ್ಕು ಲಕ್ಷ ರುಪಾಯಿಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ. ಇದು ಸಣ್ಣ ಕಾರು ಮಾರುಕಟ್ಟೆಯಲ್ಲಿ ಮತ್ತಷ್ಟು ಸ್ಪರ್ಧಾಕಣಕ್ಕೆ ವೇದಿಕೆಯೊದಗಿಸಲಿದೆ.

ನೂತನ ಸ್ಯಾಂಟ್ರೊ ಒಂದು ಲೀಟರ್ ಪೆಟ್ರೋಲ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಇನ್ನು ಚೊಕ್ಕದಾದ 800 ಸಿಸಿ ಹಾಗೂ ಹೆಚ್ಚು ಶಕ್ತಿಶಾಲಿ 1.2 ಲೀಟರ್ ಕಪ್ಪಾ ಎಂಜಿನ್ ಜೋಡಣೆಯಾದ್ದಲ್ಲಿ ಅಚ್ಚರಿಪಡಬೇಕಿಲ್ಲ.

ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಮಾರುತಿ ಆಲ್ಟೊ ಜೊತೆಗೆ ರೆನೊ ಕ್ವಿಡ್, ವ್ಯಾಗನಾರ್ ಮತ್ತು ಮಾರುತಿ ಸೆಲೆರಿಯೊ ಮಾದರಿಗಳಿಗೂ ಪ್ರತಿಸ್ಪರ್ಧೆ ಒಡ್ಡುವ ಸಾಧ್ಯತೆಯಿದೆ.

ಒಟ್ಟಿನಲ್ಲಿ 1998ನೇ ಇಸವಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿರುವ ಹ್ಯುಂಡೈ ಸ್ಯಾಂಟ್ರೊ ಇದೀಗ ಹೊಸ ತಲೆಮಾರಿನ ವಿನ್ಯಾಸವನ್ನು ಮೈಗೂಡಿಸಿಕೊಳ್ಳುವುದು ಬಹುತೇಕ ಖಚಿತವೆನಿಸಿದೆ.


Click it and Unblock the Notifications








