ಮಹತ್ವದ ತೀರ್ಪು; ದೆಹಲಿಯಲ್ಲಿ ಡೀಸೆಲ್ ಕಾರುಗಳ ಮೇಲಿನ ನಿಷೇಧ ತೆರವು
ಮಹತ್ವದ ತೀರ್ಪೋಂದನ್ನು ಪ್ರಕಟಿಸಿರುವ ದೇಶದ ಉಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್, ಕೆಲವೊಂದು ನಿಬಂಧನೆಗಳ ಮೆರೆಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಧಿಸಲಾಗಿದ್ದ 2000 ಸಿಸಿ ಗಿಂತಲೂ ಮೇಲ್ಪಟ್ಟ ಡೀಸೆಲ್ ಕಾರುಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ. ಇದರೊಂದಿಗೆ ಮಹೀಂದ್ರ ಆಂಡ್ ಮಹೀಂದ್ರ ಹಾಗೂ ಟೊಯೊಟಾದಂತಹ ದೇಶದ ಪ್ರಮುಖ ಕಾರು ಸಂಸ್ಥೆಗಳು ನಿರಾಳತೆ ಅನುಭವಿಸುವಂತಾಗಿದೆ.
ಈ ಸಂಬಂಧ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, 2000 ಸಿಸಿ ಗಿಂತಲೂ ಮೇಲ್ಪಟ್ಟ ಡೀಸೆಲ್ ಎಂಜಿನ್ ವಾಹನಗಳು ವಿಶೇಷವಾದ ಪರಿಸರ ಅಥವಾ ಹಸಿರು ತೆರಿಗೆಯನ್ನು ಪಾವಸುವಂತೆ ಸೂಚಿಸಿದೆ.

ಇದರೊಂದಿಗೆ ಹೆಚ್ಚು ಸಾಮರ್ಥ್ಯ ಡೀಸೆಲ್ ಕಾರುಗಳಿಗೆ ಪರಿಸರ ತೆರಿಗೆ ವಿಧಿಸಲಾಗುವುದು. ಅಂದರೆ ವಾಹನದ ಎಕ್ಸ್ ಶೋ ರೂಂ ಬೆಲೆಯ ಶೇಕಡಾ 1ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಪ್ರಾದೇಶಿಕ ತೆರಿಗೆ ಹಾಗೂ ವಿಮಾ ತೆರಿಗೆಯ ಹೊರತಾಗಿ ಪರಿಸರ ತೆರಿಗೆಯನ್ನು ಪರಿಗಣಿಸಲಾಗಿದೆ. ಪ್ರಸ್ತುತ ತೆರಿಗೆ ಪ್ರಮಾಣವು ತಾತ್ಕಾಲಿಕವಾಗಿದ್ದು, ಮುಂದೆ ಶೇಕಡಾ 1ಕ್ಕಿಂತಲೂ ಹೆಚ್ಚಾಗುವ ಸಂಭವವಿದೆ.

ಈ ಸಂಬಂಧ ಹಸಿರು ತೆರಿಗೆಯನ್ನು ಈಡು ಮಾಡುವುದಕ್ಕಾಗಿ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಖಾತೆಯೊಂದನ್ನು ತೆರೆಯುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಹಸಿರು ತೆರಿಗೆ ವೆಚ್ಚವನ್ನು ಪಾವತಿಸಿದ ಪತ್ರ ದೊರಕಿದ್ದಲ್ಲಿ ಮಾತ್ರ ಸಾರಿಗೆ ಇಲಾಖೆಯು ಹೆಚ್ಚು ಸಾಮರ್ಥ್ಯದ ಡೀಸೆಲ್ ಕಾರುಗಳ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂಬುದನ್ನು ಸುಪ್ರೀಂ ಕೋರ್ಟ್ ವಿವರಿಸಿದೆ.

ಪರಿಸರ ರಕ್ಷಣಾ ಪಾವತಿ ಚಾರ್ಜ್ ಗೆ ಕಡಿಮೆ ಎಂಜಿನ್ ಸಾಮರ್ಥ್ಯದ ವಾಹನಗಳನ್ನು ಒಳಪಡಿಸಬೇಕೇ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ಇದನ್ನು ನಂತರ ನಿರ್ಧರಿಸಲಾಗುವುದು ಎಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಕಾರುಗಳ ನಿಷೇಧವನ್ನು ಪ್ರಶ್ನಿಸಿ ಜರ್ಮನಿಯ ಮರ್ಸಿಡಿಸ್ ಬೆಂಝ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅಲ್ಲದೆ ಶೇಕಡಾ ಒಂದರಷ್ಟು ಪರಿಸರ ತೆರಿಗೆ ಪಾವತಿಸಲು ತಯಾರಾಗಿರುವುದಾಗಿ ತಿಳಿಸಿತ್ತು.

ಈಗ ಮಹತ್ವದ ತೀರ್ಪು ನೀಡಿರುವ ಸುಪ್ರೀಂ, ಪರಿಸರ ತೆರಿಗೆ ತರುವಾಯ 2000 ಸಿಸಿ ಮೇಲ್ಪಟ್ಟ ಡೀಸೆಲ್ ಎಂಜಿನ್ ಗಳನ್ನು ಪಡೆದ ಎಸ್ ಯುವಿ ಹಾಗೂ ಹೈ ಎಂಡ್ ಕಾರುಗಳ ರಿಜಿಸ್ಟ್ರೇಷನ್ ಗೆ ಯಾವುದೇ ಅಡ್ಡಿಯಿಲ್ಲ ಎಂದಿದೆ.


Click it and Unblock the Notifications








