ನಿಶ್ಚಿಂತತೆಯಿಂದ ಸಂಚರಿಸಿ; ಇಲ್ಲಿವೆ ದೇಶದ 5 ಸುರಕ್ಷಿತ ಕಾರುಗಳು
ಆಧುನಿಕ ಕಾಲಘಟ್ಟದಲ್ಲಿ ಪ್ರಯಾಣಿಕರ ಸುರಕ್ಷತೆಗೂ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗಿದ್ದು, ಇದರ ಭಾಗವಾಗಿ ಕಾರುಗಳ ಭದ್ರತಾ ಗುಣಮಟ್ಟದ ವೃದ್ಧಿಗೆ ಆದ್ಯತೆ ಕೊಡಲಾಗಿದೆ. ಇನ್ನೊಂದೆಡೆ ಯುರೋಪ್ ಎನ್‌ಸಿಎಪಿ ಮಾದರಿಯಲ್ಲಿ ಭಾರತೀಯ ಪ್ರಯಾಣಿಕ ಕಾರುಗಳಿಗೂ ಗರಿಷ್ಠ ಭದ್ರತೆಯನ್ನು ಖಾತ್ರಿಪಡಿಸಲು ಹೊರಟಿರುವ ಭಾರತ 2017ರ ವೇಳೆಯಾಗುವಾಗ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಕಡ್ಡಾಯಗೊಳಿಸಲಿದೆ.
ಇದರ ಭಾಗವಾಗಿ ದೇಶದ ಪ್ರತಿಯೊಂದು ವಾಹನ ಸಂಸ್ಥೆಗಳು ತಮ್ಮ ತಮ್ಮ ಕಾರುಗಳಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಬದ್ಧವಾಗಿದೆ. ಇದು ವಾಹನಗಳ ಬೆಲೆಗಳಲ್ಲಿ ಸ್ವಲ್ಪ ದುಬಾರಿ ಎನಿಸಿದರೂ ಪ್ರಯಾಣಿಕರ ಸುರಕ್ಷತೆಯನ್ನು ಗಮನಿಸಿದಾಗ ಉಚಿತವಾದ ಕ್ರಮವೆನಿಸುತ್ತಿದೆ. ಪ್ರಸ್ತುತ ಲೇಖನದಲ್ಲಿ ಸದ್ಯ ದೇಶದ ಮಾರುಕಟ್ಟೆಯಲ್ಲಿರುವ ಟಾಪ್ 5 ಸುರಕ್ಷಿತ ಕಾರುಗಳ ಬಗ್ಗೆ ಚರ್ಚಿಸಲಿದ್ದೇವೆ.

ಫೋರ್ಡ್ ಫಿಗೊ ಮತ್ತು ಫಿಗೊ ಆಸ್ಪೈರ್
ಫೋರ್ಡ್‌ನ ಜನಪ್ರಿಯ ಫಿಗೊ ಮತ್ತು ಫಿಗೊ ಆಸ್ಪೈರ್ ದೇಶದ ಸೇಫೆಸ್ಟ್ ಕಾರುಗಳಲ್ಲಿ ಒಂದಾಗಿದೆ. ಯಾಕೆಂದರೆ ಈ ಹ್ಯಾಚ್ ಬ್ಯಾಕ್ ಮತ್ತು ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಆರು ಏರ್ ಬ್ಯಾಗ್ ಗಳ ಸೌಲಭ್ಯವನ್ನು ಒದಗಿಸುತ್ತಿದೆ.

ಪೆರಿಮೀಟರ್ ಅಲರಾಂ
ಫೋರ್ಡ್ ಕಾರಲ್ಲಿ ಆಳವಡಿಸಲಾಗಿರುವ ಪೆರಿಮೀಟರ್ ಅಲರಾಂ (Perimeter Alarm) ಸಹಾಯದಿಂದ ನೀವು ನಿಶ್ಚಿಂತತೆಯಿಂದ ಕಾರು ಪಾರ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಯಾರೇ ಕಳ್ಳರು ಕಾರಿನೊಳಗೆ ಒಳನುಗ್ಗುವ ಪ್ರಯತ್ನಕ್ಕೆ ಮುಂದಾದ್ದಲ್ಲಿ ಇನ್ಸ್ಟ್ರುಮೆಂಟ್ ಪ್ಯಾನೆಲ್ ನಲ್ಲಿ ಥೆಫ್ಟ್ ಇಂಡಿಕೇಟರ್ ಆಕ್ಟಿವೇಟ್ ಆಗಲಿದ್ದು ಕಾರು ಅಲರಾಂ ಬಾರಿಸಲಿದೆ. ತುರಂತ್ ಆಗಿ ಹೆಡ್ ಲೈಟ್ ಮತ್ತು ಪಾರ್ಕಿಂಗ್ ಲೈಟ್ ಗಳು ಫ್ಲ್ಯಾಶ್ ಆಗಲಿದೆ.

ಹಿಲ್ ಲಾಂಚ್ ಅಸಿಸ್ಟ್
ಗುಡ್ಡಗಾಡು ಪ್ರದೇಶಗಳಲ್ಲಿ ಕಾರು ಮೇಲಕ್ಕೇರಿಸುವ ತಂತ್ರವನ್ನು ಕರಗತ ಮಾಡಿಕೊಳ್ಳದಿದ್ದಲ್ಲಿ ಯಾವುದೇ ತೊಂದರೆ ಇಲ್ಲ ಬಿಡಿ. ಫೋರ್ಡ್ ಕಾರಿನಲ್ಲಿರುವ ನೂತನ ಹಿಲ್ ಲಾಂಚ್ ಅಸಿಸ್ಟ್ ಮುಖಾಂತರ ನೀವು ಬ್ರೇಕ್ ಪೆಡಲ್ ನಿಂದ ಕಾಲು ತೆರವು ಮಾಡಿದರೂ ಸ್ವಲ್ಪ ಸೆಕೆಂಡುಗಳ ವರೆಗೆ ಬ್ರೇಕ್ ಬೀಳಲಿದೆ. ಇದು ನಿಮಗೆ ನಯವಾಗಿ ಆಕ್ಸಿಲೇಟರ್ ಕೊಡಲು ಸಹಕಾರಿಯಾಗಲಿದೆ. ಈ ಮುಖಾಂತರ ಕಾರು ಹಿಂದಕ್ಕೆ ಸರಿಯಲಿದೆಯೆಂಬ ಭಯ ಬೇಡ. ಇದರ ಹೊರತಾಗಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ವ್ಯವಸ್ಥೆಯನ್ನು ಫೋರ್ಡ್ ನೀಡುತ್ತಿದೆ.

ಹ್ಯುಂಡೈ ಐ20
ಅತ್ತ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ತನ್ನ ಜನಪ್ರಿಯ ಐ20 ಕಾರಿನಲ್ಲಿ ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಸ್ಮಾರ್ಟ್ ಪೆಡಲ್ ವ್ಯವಸ್ಥೆಯನ್ನು ಕೊಡಲಾಗಿದೆ. ಇದರ ಮೂಲಕ ನೀವು ಏಕಕಾಲಕ್ಕೆ ಬ್ರೇಕ್ ಹಾಗೂ ಆಕ್ಸಿಲೇಟರ್ ತುಳಿದ್ದಲ್ಲಿ ಬ್ರೇಕ್ ಮಾತ್ರ ಅನ್ವಯವಾಗಲಿದೆ. ಇದರಿಂದ ವಾಹನ ದಟ್ಟಣೆಯಲ್ಲಿ ಸುರಕ್ಷಿತ ಚಾಲನೆಗೆ ನೆರವಾಗಲಿದೆ. ಅಷ್ಟೇ ಯಾಕೆ ಮುಸ್ಸಂಜೆಯಲ್ಲಿ ಸ್ವಯಂಚಾಲಿತವಾಗಿ ಆನ್ ಆಗಲಿರುವ ಹೆಡ್ ಲೈಟ್ ಗಳು ಬೆಳಗ್ಗಿನ ಜಾವ ಆಫ್ ಆಗಲಿದೆ. ಅಂತೆಯೇ ಯಾವುದೇ ಅಡೆತಡೆ ಎದುರಾದ್ದಲ್ಲಿ ಪವರ್ ವಿಂಡೋಗಳು ಆಟೋಮ್ಯಾಟಿಕ್ ಆಗಿ ಕೆಳಕ್ಕೆ ಸರಿಯಲಿದೆ.

ಇವೆಲ್ಲದರ ಜೊತೆಗೆ ರಿಯರ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ, ಸ್ಟೀರಿಂಗ್ ವೀಲ್ ನಲ್ಲೇ ಆಡಿಯೋ ನಿಯಂತ್ರಣ ವ್ಯವಸ್ಥೆಯನ್ನು ಕೊಡಲಾಗಿದೆ. ಇನ್ನು ಇಂಧನ ಮಟ್ಟ ಕಡಿಮೆಯಿದ್ದಲ್ಲಿ ಅಥವಾ ಡೋರ್/ಟೇಲ್ ಗೇಟ್ ಲಾಕ್ ಮಾಡದೇ ಹೋದ್ದಲ್ಲಿ ಹಾಗೆಯೇ ಚಾಲಕ ಸೀಟು ಬೆಲ್ಟ್ ಧರಿಸದಿದ್ದಲ್ಲಿ ಎಚ್ಚರಿಸಲಿದೆ.

ಫೋಕ್ಸ್ ವ್ಯಾಗನ್ ಪೊಲೊ
ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿರುವ ಫೋಕ್ಸ್ ವ್ಯಾಗನ್ ಪೊಲೊ ಕಾರಿನಲ್ಲೂ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಇದರ ಜೊತೆಗೆ ಎಂಜಿನ್ ಇಂಮೊಬಿಲೈಜರ್, ಆಟೋ ಡಿಮ್ಮಿಂಗ್ ಐಆರ್‌ವಿಎಂ, ಹೈ ಮೌಂಟೆಡ್ ಸ್ಟಾಪ್ ಲೈಟ್, ಪವರ್ ವಿಂಡೋ, ರೈನ್ ಸೆನ್ಸಿಂಗ್ ವೈಪರ್, ಲೇನ್ ಚೇಂಜ್ ಇಂಡಿಕೇಟರ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಅಡೆತಡೆ ಎದುರಾದ್ದಲ್ಲಿ ವಿಂಡೋಗಳು ಆಟೋಮ್ಯಾಟಿಕ್ ಆಗಿ ಕೆಳಕ್ಕೆ ಸರಿಯಲಿದೆ.

ಹ್ಯುಂಡೈ ಕ್ರೆಟಾ
ದೇಶದ ಅತ್ಯುತ್ತಮ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿರುವ ಹ್ಯುಂಡೈ ಕ್ರೆಟಾ ಕಾರಿನಲ್ಲೂ ಉನ್ನತ ಮಟ್ಟದ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗಿದೆ. ಇದು ಆರ್ ಏರ್ ಬ್ಯಾಗ್ ಜೊತೆ ಎಬಿಎಸ್, ಇಬಿಡಿ, ಇಎಸ್ ಸಿ, ವಿಎಸ್ ಎಂ (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ ಕಂಟ್ರೋಲ್), ಎಚ್ ಎಸಿ (ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್), ರಿಯರ್ ಪಾರ್ಕಿಂಗ್ ಅಸಿಸ್ಟ್ ಜೊತೆ ಕ್ಯಾಮೆರಾ, ಲೇನ್ ಚೇಂಜ್ ಇಂಡಿಕೇಟರ್, ಲೇನ್ ಚೇಂಜ್ ಫ್ಲ್ಯಾಶ್ ಹೊಂದಾಣಿಕೆ, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಸ್ಟೀರಿಂಗ್ ವೀಲ್ ಮೌಂಟೆಡ್ ನಿಯಂತ್ರಣ ವ್ಯವಸ್ಥೆಗಳಿರಲಿದೆ.

ಟೊಯೊಟಾ ಲಿವಾ ಮತ್ತು ಎಟಿಯೋಸ್
ಭಾರತದಲ್ಲಿ ಲಭ್ಯವಿರುವ ಅತ್ಯಂತ ಸುರಕ್ಷಿತ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಟೊಯೊಟಾ ಕಾರುಗಳಲ್ಲೂ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಂಜಿನ್ ಇಂಮೊಬಿಲೈಜರ್, ರಿವರ್ಸ್ ಸೆನ್ಸಾರ್, ಚಾಲಕ ಸೀಟು ಬೆಲ್ಟ್ ವಾರ್ನಿಂಗ್, ಡೋರ್ ವಾರ್ನಿಂಗ್, ಹೆಡ್ ಲ್ಯಾಂಪ್ ವಾರ್ನಿಂಗ್ ಮತ್ತು ಕೀಲೆಸ್ ಎಂಟ್ರಿ ಸೇವೆಯನ್ನು ನೀಡಲಾಗುತ್ತಿದೆ.


Click it and Unblock the Notifications








